ಮೈಸೂರು

ಕುಡಿಯುವ ನೀರು ದುರ್ಬಳಕೆಯಾಗುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಮಸ್ಥರ ಕಷ್ಟ ಕೇಳುವವರಿಲ್ಲ

ಬೈಲಕುಪ್ಪೆ : ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಗಳಿಂದ ಒಂಭತ್ತು ಕುಟುಂಬಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಳೇಗುಡ್ಡೆನಹಳ್ಳಿ ಗ್ರಾಮದ ಶ್ರೀ ಚೌಡಮ್ಮ ತಾಯಿ ದೇವಾಲಯದ ಸಮೀಪವಿರುವ ಒಂಭತ್ತು ಕುಟುಂಬಗಳ ಪರಿಸ್ಥತಿ ಹೇಳತೀರದಾಗಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ತಮ್ಮ ಮನೆಗಳನ್ನು ನಿರ್ಮಿಸಿಕೊಂಡು ಕೇವಲ ಕೂಲಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಈ ಕುಟುಂಬಗಳು 60ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ.

ಕೊಪ್ಪ ಸಮೀಪವಿರುವ ಡೋಂಗ್ರಿ ಗೆರಾಸಿಯಾ ಕಾಲೋನಿ ಸಮೀಪದಿಂದ ಈ ಒಂಬತ್ತು ಕುಟಂಬಗಳಿಗೆ ಪೈಪ್ ಸಂಪರ್ಕದಿಂದ ನೀರು ಒದಾಗಿಸಲಾಗಿದೆ. ಆದರೆ ಮಧ್ಯ ಭಾಗದಲ್ಲಿ ಕೆಲವು ಕಿಡಿಗೇಡಿಗಳು ನೀರಿನ ಸಂಪರ್ಕವನ್ನು ತೋಟಗಾರಿಕೆಗೆ ಬಳಸಿಕೊಳ್ಳುತಿರುವುದರಿಂದ ತಳಭಾಗದಲಿರುವ ಸಲ್ವಿ, ರಮೇಶ್, ಮೈಕಾಲ್, ಪಾತೀ, ರಾಜಣ್ಣ, ಪಾಪತ್ತಿ, ಆಂಥೋಣಿ, ರೋಸಿ, ಮಾಣಿಕ್ಯ ಸೇರಿದಂತೆ ಈ ಒಂಬತ್ತು ಕುಟಂಬಗಳಿಗೆ ನೀರು ಪುರೈಕೆಯಾಗುತಿಲ್ಲ.

ಈ ಬಗ್ಗೆ ಕಳೆದ ಎರೆಡು ಮೂರು ವರ್ಷಗಳಿಂದ ಕೊಪ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳಿಗೆ ದೂರು ನಿಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

ಕನಿಷ್ಠ ಒಂದು ಕೈ ಪಂಪನ್ನಾದರೂ ಅಳವಡಿಸಿಕೊಡುವಂತೆ ಮನವಿ ಸಲ್ಲಿಸಿದ್ದರೂ ಮೀನಮೇಷ ಎಣಿಸುತಿದ್ದಾರೆ. ಅಷ್ಟೇ ಅಲ್ಲದೆ ಸರಬರಾಜಾಗುವ ನೀರನ್ನು ಸಹ ಬೆಳಗಿನ ಜಾವ 6 ಘಂಟಯಿಂದ 8 ಘಂಟೆಯ ಒಳಗೆ ಸರಬರಾಜು ಮಾಡಿದರೆ ಏಲ್ಲರೂ ನೀರು ಸಂಗ್ರಹಿಸಿಕೊಳ್ಳಲು ಅನುಕೂಲವಾಗುತ್ತದೆ.

ನೀರು ಸರಬರಾಜು ಮಾಡುವ ವಾಟರ್‍ಮನ್ ಮಧ್ಯಹ್ನ 1 ಗಂಟೆಯಿಂದ 3 ಘಂಟೆ ಅವಧಿಯಲ್ಲಿ ನೀರು ಸರಬರಾಜು ಮಾಡಿದರೆ ಎಲ್ಲರೂ ಕೂಲಿಗೆ ಹೊರಗೆ ಹೋಗುವುದರಿಂದ ಕುಡಿಯುವ ನೀರು ದೊರೆಯದೆ, 2-3 ಕಿ.ಮೀ. ದೂರದಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಅಥವಾ ರೈತರ ಹೊಲದಲ್ಲಿ ತೋಡಿಸಲಾಗಿರುವ ಕೊಳವೆ ಬಾವಿಯಲ್ಲಿ ರಾತ್ರಿಯ ವೇಳೆ ತೆರಳಿ ನೀರು ಹೊತ್ತು ತರಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸುತಿದ್ದಾರೆ.

ಕೊಪ್ಪ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಕೂಡಲೆ ಈ ಬಗ್ಗೆ ಗಮನ ಹರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸದೆ ಇದ್ದರೆ ಪಂಚಾಯಿತಿ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಾನೂನು ಕ್ರಮ : ಪಿಡಿಓ ರವಿ

ಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ರವಿ ಮಾತನಾಡಿ, ವಿದ್ಯುತ್ ಸರಬರಾಜು ಆದ ಸಂದರ್ಭದ ಟ್ಯಾಂಕ್‌ಗೆ ನೀರು ಭರ್ತಿ ಮಾಡಿಕೊಂಡು ಪೂರೈಕೆ ಮಾಡಬೇಕಾದ ಪರಿಸ್ಥಿತಿ ಇದೆ.

ಇಲ್ಲಿನ ಜನ ಕೂಲಿಗೆ ಹೋದ್ದಾಗ ನೀರು ಸಂಗ್ರಹಿಸಲು ಆಗಿಲ್ಲ. ಇದಕ್ಕೆ ನಮ್ಮಿಂದ ಪರಿಹಾರ ಸಾಧ್ಯವೇ ಎನ್ನುತ್ತಾರೆ. ತೋಟಕ್ಕಾಗಿ ನೀರು ಬಳಸಿಕೊಳ್ಳುತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ಮುಂದೆ ಕುಡಿಯುವ ನೀರಿನ ಸಮಸ್ಯೆ ಬಾರದ ಹಾಗೆ ನಿಗಾ ವಹಿಸುವುದಾಗಿ ತಿಳಿಸಿದರು.

Leave a Reply

comments

Related Articles

error: