ದೇಶಪ್ರಮುಖ ಸುದ್ದಿ

ಸುಪ್ರೀಂ ಕೊಲಿಜಿಯಂಗೆ ನ್ಯಾಯಮೂರ್ತಿ ಆರ್.ಭಾನುಮತಿ ನೇಮಕ: 14 ವರ್ಷಗಳ ಬಳಿಕ ಮಹಿಳಾ ನ್ಯಾಯಮೂರ್ತಿಗೆ ಸ್ಥಾನ

ನವದೆಹಲಿ,ನ.19-ನ್ಯಾಯಮೂರ್ತಿ ಆರ್.ಭಾನುಮತಿ ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ನೇಮಕ ಗೊಂಡಿದ್ದಾರೆ. ಆ ಮೂಲಕ 14 ವರ್ಷಗಳ ಬಳಿಕ ಮಹಿಳಾ ನ್ಯಾಯಮೂರ್ತಿಯೊಬ್ಬರು ಕೊಲಿಜಿಯಂನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಹಾಲಿ ನ್ಯಾಯ­ಮೂರ್ತಿಗಳ ಪೈಕಿ ಹಿರಿತನ­ದಲ್ಲಿ 5ನೇಯವರಾಗಿರುವ ನ್ಯಾ.ಭಾನು­ಮತಿ ಅವರು ಸಿಜೆಐ ಗೊಗೊಯ್‌ ಅವರ ನಿವೃತ್ತಿ ನಂತರ ಕೊಲಿಜಿಯಂಗೆ ನೇಮಕಗೊಂಡಿ­ದ್ದಾರೆ.

ಕೊಲೆಜಿಯಂನ ಕೊನೆಯ ಮಹಿಳಾ ನ್ಯಾಯಮೂರ್ತಿಯಾಗಿದ್ದವರು ನ್ಯಾ.ರುಮಾ ಪಾಲ್‌. ಅವರು 2006ರ ಜೂನ್ 2  ರಂದು ನಿವೃತ್ತರಾದ 14 ವರ್ಷಗಳ ನಂತರ ನ್ಯಾ.ಭಾನುಮತಿ ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಸೇವಾವಧಿ 2020ರ ಜುಲೈ 19ರವರೆಗೆ ಇದೆ.

ಸಿಜೆಐ ಎಸ್‌.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ, ಅರುಣ್‌ ಮಿಶ್ರಾ, ಆರ್‌.ಎಫ್‌.ನಾರಿಮನ್‌ ಮತ್ತು ಆರ್‌.ಭಾನುಮತಿ ಹಾಲಿ ಕೊಲಿಜಿಯಂ ಸದಸ್ಯರಾಗಿದ್ದಾರೆ.

ತಮಿಳು­ನಾಡು ಮೂಲದ ನ್ಯಾ.ಭಾನುಮತಿ ಅವರು ತಿರುಪತ್ತೂರು, ಕೃಷ್ಣಗಿರಿ ಕೋರ್ಟ್‌ಗಳಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. 1988ರಲ್ಲಿ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡು ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2003ರ ಏ.3ರಂದು ಮದ್ರಾಸ್‌ ಹೈಕೋರ್ಟ್‌ ನ್ಯಾಯ­ಮೂರ್ತಿಯಾಗಿ ಬಡ್ತಿ ಪಡೆದ ಅವರು, 2013ರ ನ.16­ರಂದು ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ­ಯಾಗಿ ನೇಮಕಗೊಂಡರು.

2014ರ ಆ.13ರಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ­ಯಾಗಿದ್ದಾರೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ನೀಡಿದ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ನ್ಯಾ. ಭಾನುಮತಿ ಕೂಡ ಒಬ್ಬರು. ಮಧ್ಯಪ್ರದೇಶ ಹೈಕೋರ್ಟ್‌ನ ಜಡ್ಜ್‌ ಎಸ್‌.ಕೆ.ಗಂಗಲೆ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಅಂದಿನ ರಾಜ್ಯಸಭೆ ಸಭಾಪತಿ ಹಮೀದ್‌ ಅನ್ಸಾರಿ ರಚಿಸಿದ ವಿಚಾರಣಾ ಸಮಿತಿ ಮುಂದಾಳತ್ವವನ್ನು ಭಾನುಮತಿ ವಹಿಸಿ­ದ್ದರು. ಸಮಿತಿಯು ಗಂಗಲೆ ಅವರಿಗೆ ಕ್ಲೀನ್‌ಚಿಟ್‌ ನೀಡಿದೆ. (ಎಂ.ಎನ್)

Leave a Reply

comments

Related Articles

error: