ಮೈಸೂರು

ಲಯನ್ಸ್ ಕನ್ನಡ ರಾಜ್ಯೋತ್ಸವ ಆಚರಣೆ : ಸಾಧಕರಿಗೆ ಸನ್ಮಾನ

ಮೈಸೂರು, ನ.19:- ನಗರದ ಪ್ರತಿಷ್ಠಿತ ಸಂಸ್ಥೆಯಾದ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆಗಳ ಒಕ್ಕೂಟ, ಜಿಲ್ಲೆ 317-ಎ ವತಿಯಿಂದ ಇತ್ತೀಚೆಗೆ ಕನ್ನಡ ಕಹಳೆ ಮೊಳಗಿತು. ಕನ್ನಡ ಕಂಪಿನೊಂದಿಗೆ ಭರತನಾಟ್ಯ, ಹಾಡು, ನೃತ್ಯ, ಹಾಸ್ಯ ಚಟಾಕಿ ಮತ್ತು ಯೋಗ ಪ್ರದರ್ಶನ ಕಲಾಭಿಮಾನಿಗಳಿಗೆ ರಸದೌತಣ ನೀಡಿತು.

64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ  ಕಲಾಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ವಿ.ನಾಗರಾಜ್ ವಿ.ಬೈರಿ ಲಯನ್ಸ್ ಸಂಸ್ಥೆ ಕನ್ನಡದ ವಿವಿಧ ಚಟುವಟಿಕೆಗಳನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ನಾವು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದೇವೆ ಎಂದರು. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಮೈಸೂರಿಗೆ ಕನ್ನಡ ಸಂಸ್ಕೃತಿಯ ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ಅಶ್ವತ್‍ನಾರಾಯಣ್ ಮತ್ತು ತಂಡದವರು ಹೊತ್ತುಕೊಂಡು ಬಹಳ ಅದ್ಭುತವಾಗಿ ಸಮಾರಂಭವನ್ನು ಕಳೆ ಕಟ್ಟಿ ಕೊಟ್ಟಿರುತ್ತಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮಕ್ಕೆ ಯುವ ಪ್ರತಿಭೆ ಸಿರಿಮಾ ಬಿ.ರಾಜು ತಮ್ಮ ಅಮೋಘ ಭರಟನಾಟ್ಯದ ಮೂಲಕ ಚಾಲನೆ ನೀಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದರು. ನಂತರ ವಿದ್ವಾನ್ ಸುಮಂತ್ ವಶಿಷ್ಠ-ದಿವ್ಯಾ ರಾಮಚಂದ್ರ ಅವರ ಸುಶ್ರಾವ್ಯ ಕಂಠದಿಂದ ಸುಗಮ ಸಂಗೀತದ ಸುಧೆಯನ್ನು ಹರಿಸಿದರು. ಬಳಿಕ ಗಾಯಕ ವಿನಯ್ ಭಾರ್ಗವ್ ‘ಕೃಷ್ಣ ರುಕ್ಮಿಣಿ’ ಚಿತ್ರದ ‘ಕರ್ನಾಟಕದ ಇತಿಹಾಸದಲಿ’ ಹಾಡನ್ನು ಹಾಡಿದರೆ, ಗಾಯಕಿ ದಿವ್ಯ ‘ಬೆಳ್ಳಿಕಾಲುಂಗುರ’ ಚಿತ್ರದ ‘ಕೇಳಿಸದೆ ಕಲ್ಲುಕಲ್ಲಿನಲಿ’ ಹಾಡನ್ನು ಸುಮಧುರವಾಗಿ ಹಾಡಿ ಎಲ್ಲರನ್ನೂ ರಂಜಿಸಿದರು.

ಗಾಯಕ ಸುಮಂತ್ ‘ಬೇವು ಬೆಲ್ಲ’ ಚಿತ್ರದ ‘ಜನುಮ ನೀಡುತ್ತಾಳೆ ನಮ್ಮ ತಾಯಿ’ ಹಾಡನ್ನು ಹಾಡಿದರೆ, 3 ವರ್ಷದ ಪುಟಾಣಿ ಜ್ಞಾನ ‘ತಿಂಗಾಳು ಮುಳುಗಿದವೋ’ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಪ್ರೇಕ್ಷಕರಿಂದ ಶಹಬ್ಬಾಸ್‍ಗಿರಿ ಪಡೆದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಅಂತರರಾಷ್ಟ್ರೀಯ ಯೋಗ ಪಟು ಹೆಚ್.ಖುಷಿ ಪಾಲ್ಗೊಂಡು ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ರೆಡ್ ಎಫ್.ಎಂ. 93.5 ಆರ್.ಜೆ. ಎಂ.ಪ್ರಸನ್ನ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾಧ್ಯಕ್ಷ ಹೆಚ್.ಎಸ್.ಅಶ್ವತ್‍ನಾರಾಯಣ್, ಮೊದಲನೆ ಹಾಗೂ ಎರಡನೇ ರಾಜ್ಯಪಾಲರುಗಳಾದ  ರಮೇಶ್, ಪ್ರಭಾಮೂರ್ತಿ, ಮಲ್ಲಪ್ಪಗೌಡ ಮತ್ತು ಮೈಸೂರಿನ ಧ್ವನಿ ಮೈಕ್ ಚಂದ್ರು ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಹನೂರು ಚೆನ್ನಪ್ಪ, ಉದಯಕುಮಾರ್, ಟಿ.ಎನ್.ನಾಗಭೂಷಣ್, ಹೆಚ್.ಖುಷಿ ಮತ್ತು ಆರ್.ಎಂ.ಸುಮಂತ್ ವಶಿಷ್ಠ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: