ಮೈಸೂರು

‘ಸಾತ್ವಿಕ ಭೋಜನ ಸ್ವೀಕಾರದಿಂದ ಮನಸ್ಸು ಬುದ್ಧಿಶಕ್ತಿ ನಿಯಂತ್ರಣ : ಸಂಸ್ಕೃತಿ ಚಿಂತಕಿ ಸೇವಕಿ ನಾಗರತ್ನ ರಾಜೇಂದ್ರ ಪ್ರಸಾದ್ ಅಭಿಮತ

ಮೈಸೂರು, ನ.19:-ನಗರದ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ‘ಮಾತೃ ಭೋಜನ, ತುಳಸಿ ಪೂಜೆ ಹಾಗೂ ಸಾಂಪ್ರದಾಯಿಕ ದಿನಾಚರಣೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಾಮರಾಜನಗರದ ಸಂಸ್ಕೃತಿ ಚಿಂತಕಿ  ನಾಗರತ್ನ ರಾಜೇಂದ್ರಪ್ರಸಾದ್ ಜ್ಯೋತಿ ಬೆಳಗಿಸಿ ಮಾತನಾಡುತ್ತ, ಭೋಜನವೆಂಬುದು ಒಂದು ಯಜ್ಞರೂಪ. ಮನುಷ್ಯನ ಊಟವೆಂಬುದು ಪ್ರಾಣಿಗಳಂತೆ ಹಸಿವಾದಾಗ, ಆಹಾರ ಸಿಕ್ಕಾಗ ಹೊಟ್ಟೆ ತುಂಬಿಸಿಕೊಳ್ಳುವ ಪ್ರಕ್ರಿಯೆಯಲ್ಲ. ಅದಕ್ಕೊಂದು ಸುಂದರವಾದ ರೂಪುರೇಷೆ ಇದೆ. ಅದರಲ್ಲಿ ಶುಚಿತ್ವ, ರುಚಿತ್ವ, ಸಂತೃಪ್ತಿಯನ್ನು ನೀಡುವ ಪರಿಕಲ್ಪನೆ ಇದೆ. ಅದು ನಮ್ಮ ಜೀವ ಮತ್ತು ಜೀವನ ಇವೆರಡನ್ನು ಕಾಪಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಿ ಬೇಕಾದರೂ ಭೋಜನವನ್ನು ಸ್ವೀಕರಿಸುವುದನ್ನು ನಾವು ಕಾಣಬಹುದೆಂದು ವಿಷಾದ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಾದ ನೀವು ಸಾತ್ವಿಕ ಭೋಜನ ಸ್ವೀಕರಿಸುವುದರಿಂದ ನಿಮ್ಮ ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಆ ಮೂಲಕ ಸಮಾಜದಲ್ಲಿ ಒಳ್ಳೆಯ ಸತ್ಪ್ರಜೆಗಳಾಗಿ ರೂಪುಗೊಳ್ಳಬಹುದು ಎಂದರು.

ಅಮ್ಮನ ಕೈಯಿಂದ ತಯಾರಾದ ಭೋಜನ ಅಮೃತವಾಗಿರುತ್ತದೆ. ಅದನ್ನು ದೇವರ ನೈವೇದ್ಯವೆಂದು ಭಾವಿಸಿ ನಾವು ಸ್ವೀಕರಿಸಬೇಕು ಎಂದು ಹೇಳಿ ತಾಯಿಯ ಕೈ ತುತ್ತಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಸೂರಿನ ಇಸ್ಕಾನ್ ದೇವಾಲಯದ  ಶ್ರೀಪಾದ ದಾಸ್ ಮಾತನಾಡಿ ತುಳಸಿ  ಕ್ಷೀರ ಸಮುದ್ರದ ಮಥನದಲ್ಲಿ ದೊರೆತದ್ದು. ಈ ತುಳಸಿಯಲ್ಲಿ ಲಕ್ಷ್ಮಿ ಇರುತ್ತಾಳೆ ಎಂಬುದು ನಂಬಿಕೆ. ಜೊತೆಗೆ ತುಳಸಿ ತುಂಬಾ ಮದ್ದಿನ ಗುಣಗಳನ್ನು ಕೂಡ ಹೊಂದಿದೆ. ತುಳಸಿಗೆ ನಮ್ಮನ್ನು ದೇವರೊಂದಿಗೆ ಸೇರಿಸುವ ಒಂದು ಶಕ್ತಿ ಇದೆ. ಆದ್ದರಿಂದ ತುಳಸಿಯನ್ನು ದಿನಂಪ್ರತಿ ನಿಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ಮಾತುಗಳನ್ನಾಡಿದ, ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಇವತ್ತಿನ ದಿನದ ಮಹತ್ವ ನಿಮ್ಮ ತಾಯಿಗೆ ಮತ್ತು ಆಕೆ ನಿಮಗಾಗಿ ಮಾಡಿರುವಂತಹ ತ್ಯಾಗಗಳಿಗೆ ಗೌರವ ಕೊಡುವುದಕ್ಕೆ ಇರುವ ಸುದಿನ. ಹಾಗಾಗಿ ಈ ದಿನವನ್ನು ಸದುಪಯೋಗ ಪಡಿಸಿಕೊಂಡವರಿಗೆಲ್ಲ ಶುಭವಾಗಲಿ. ಈ ಸಮಾಜದಲ್ಲಿ ನಮ್ಮ ಇರುವಿಕೆಗೆ ಕಾರಣಕರ್ತಳಾದ ಅಮ್ಮನನ್ನು ಪ್ರತಿಯೊಂದು ಕ್ಷಣದಲ್ಲೂ ನೆನಪಿಸಿಕೊಳ್ಳಬೇಕು. ಸಾಧ್ಯವಾದಷ್ಟು ತಾಯಿ ತಂದೆಗೆ ಎದುರು ಮಾತನಾಡದೆ, ಅವರನ್ನು ಗೌರವಿಸಿ ನಿಮ್ಮ ಜೀವನದಲ್ಲಿ ಉತ್ತುಂಗಕ್ಕೆ  ಏರಲು ಮೆಟ್ಟಿಲುಗಳಾಗಿ ಸದಾ ನಿಮ್ಮೊಂದಿಗೆ ಅವರಿರುತ್ತಾರೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ  ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಆಗಮಿಸಿ  ತಮ್ಮ ಮಕ್ಕಳಿಗೆ ಕೈತುತ್ತನ್ನು ತಿನ್ನಿಸಿ ಮಾತೃ ಭೋಜನವನ್ನು ಯಶಸ್ವಿಗೊಳಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಖಜಾಂಜಿ ಎಸ್.ಮನೋಹರ್, ಭೌತಶಾಸ್ತ್ರ ಪ್ರಾಚಾರ್ಯ ಹೆಚ್.ಎಸ್. ರಂಗನಾಥ್, ಕಾಲೇಜಿನ ಆಡಳಿತಾಧಿಕಾರಿ ಡಾ. ಕೆಂಪೇಗೌಡ, ಪ್ರಾಂಶುಪಾಲರಾದ ರಚನ್ ಅಪ್ಪಣಮಯ್ಯ, ಇಂಗ್ಲೀಷ್ ಉಪನ್ಯಾಸಕಿ ಸೌಮ್ಯ ನಾಯಕ್, ವಿದ್ಯಾರ್ಥಿಗಳ ಪೋಷಕರಾದ ರಾಜೇಶ್ವರಿ, ಸೌಮ್ಯ, ರಾಜೇಶ್ವರಿ ಶಿವಶಂಕರ್ ಉಪಸ್ಥಿತರಿದ್ದರು.  ವಿದ್ಯಾರ್ಥಿನಿ ಭೂಮಿಕ ಸ್ವಾಗತಿಸಿ, ಸಂಜನಾ  ಕಾರ್ಯಕ್ರಮ ನಿರೂಪಿಸಿದರು.  ಭರಣಿ ವಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: