ಕರ್ನಾಟಕಪ್ರಮುಖ ಸುದ್ದಿ

ನಿತ್ಯಾನಂದ ಆಶ್ರಮದಲ್ಲಿ ಇಬ್ಬರು ಯುವತಿಯರ ಅಕ್ರಮ ಬಂಧನ: ಕೋರ್ಟ್ ಮೊರೆಹೋದ ಪೋಷಕರು

ಬೆಂಗಳೂರು,ನ.19-ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿಯ ಬೆಂಗಳೂರಿನ ಬಿಡದಿ ಆಶ್ರಮದಲ್ಲಿರುವ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸುವಂತೆ ಕೋರಿ ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೆಟ್ಟಲೇರಿದ್ದಾರೆ.

ಜನಾರ್ಧನ ಶರ್ಮಾ ಮತ್ತು ಅವರ ಪತ್ನಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಬಂಧ ಮುಕ್ತಗೊಳಿಸಿ ನಮಗೆ ಒಪ್ಪಿಸಬೇಕೆಂದು ಕೋರ್ಟ್ ಮೆಟ್ಟಲೇರಿದ್ದಾರೆ. ದೂರಿನ ಅನ್ವಯ ಅಹಮದಾಬಾದ್ ಪೊಲೀಸರು ನಿತ್ಯಾನಂದ ಸ್ವಾಮೀಜಿ ಮತ್ತು ಆಶ್ರಮದ ಇಬ್ಬರು ವಾರ್ಡನ್ ಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಮಕ್ಕಳನ್ನು ವಶಕ್ಕೆ ಒಪ್ಪಿಸುವಂತೆ ಗುಜರಾತ್ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ ಎಂದು ಜನಾರ್ಧನ ಶರ್ಮಾ ದಂಪತಿಗಳ ಪರ ವಕೀಲ ಪ್ರೀತೇಶ್ ಶಾ ಮಾಹಿತಿ ನೀಡಿದ್ದಾರೆ.

2013ರಲ್ಲಿ ಜನಾರ್ಧನ ಶರ್ಮಾ ಅವರು 7 ರಿಂದ 15 ವರ್ಷದೊಳಗಿನ ತನ್ನ ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಬೆಂಗಳೂರಿನಲ್ಲಿರುವ ನಿತ್ಯಾನಂದನ ಶಿಕ್ಷಣ ಸಂಸ್ಥೆಗೆ ಸೇರಿಸಿದ್ದರಂತೆ. ಈಗ ಅವರೆಲ್ಲರನ್ನು ಅಹಮದಾಬಾದ್ ನ ದೆಹಲಿ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ನಿತ್ಯಾನಂದನ ಧ್ಯಾನಪೀಠವಾಗಿರುವ ಯೋಗಿನಿ ಸರ್ವಜ್ಞಾನಪೀಠಂ ಎಂಬಲ್ಲಿಗೆ ವರ್ಗಾಯಿಸಲಾಗಿದೆ ಎಂದು ದಂಪತಿಗಳು ಕೋರ್ಟ್ ಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂಸ್ಥೆಯಲ್ಲಿದ್ದ ನಾಲ್ವರು ಮಕ್ಕಳಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಪೊಲೀಸರ ಸಹಾಯದಿಂದ ಕರೆತರುವಲ್ಲಿ ದಂಪತಿಗಳು ಯಶಸ್ವಿಯಾಗಿದ್ದಾರೆ. ಆದರೆ ಅವರ ಹಿರಿಯ ಪುತ್ರಿಯರು ತಂದೆ, ತಾಯಿ ಜೊತೆ ಬರಲು ನಿರಾಕರಿಸಿದ್ದಾರೆ. ತಮ್ಮ ಇಬ್ಬರು ಕಿರಿಯ ಪುತ್ರಿಯರನ್ನು ಎರಡು ವಾರಗಳ ಕಾಲ ಅಕ್ರಮ ದಿಗ್ಬಂಧನದಲ್ಲಿರಿಸಿ ನಿದ್ದೆ ಮಾಡಲೂ ಬಿಟ್ಟಿರಲಿಲ್ಲ. ಇಬ್ಬರು ಹಿರಿಯ ಪುತ್ರಿಯರನ್ನು ಕಾಪಾಡಬೇಕು. ಅವರನ್ನು ತಮ್ಮ ವಶಕ್ಕೆ ಒಪ್ಪಿಸಲು ಶಿಕ್ಷಣ ಸಂಸ್ಥೆಗೆ ಸೂಚಿಸಿ ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಮಕ್ಕಳನ್ನು ಭೇಟಿ ಮಾಡಲು ಹೋದರೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ಆದರೆ ಮಕ್ಕಳ ವಿಡಿಯೋವನ್ನು ಆಗಾಗ ಹರಿಯಬಿಡಲಾಗುತ್ತಿದೆ. ಹೀಗಾಗಿ ನಮಗೆ ಅನುಮಾನವಿದೆ. ಎಲ್ಲೋ ಏನೋ ತಪ್ಪಿದೆ ಅನಿಸುತ್ತಿದೆ ಹೀಗಾಗಿ ನಾವು ಗುಜರಾತ್ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿತ್ತು. ಇದರಲ್ಲಿ ದಂಪತಿಗಳ ಪುತ್ರಿ ಎನ್ನಲಾಗುತ್ತಿರುವ ಯುವತಿಯೊಬ್ಬಳು ಮಾತನಾಡಿದ್ದಳು. ಸ್ವಇಚ್ಛೆಯಿಂದಲೇ ನಾನು ಆಶ್ರಮದಲ್ಲಿದ್ದೇನೆಂದು ಆಕೆ ಹೇಳಿಕೊಂಡಿದ್ದಳು. ಕಳೆದ 6 ವರ್ಷಗಳಿಂದ ನಾನು ಆಶ್ರಮದಲ್ಲಿದ್ದು, ಸಂತೋಷವಾಗಿಯೇ ಇದ್ದೇನೆ. ಸನ್ಯಾಸಿನಿಯಾಗಿ ನಾನಿಲ್ಲಿ ಇದ್ದುಕೊಂಡಿದ್ದು, ಸ್ವಇಚ್ಛೆಯಿಂದ ನಾನು ಈ ದಾರಿಯನ್ನು ಆರಿಸಿಕೊಂಡಿದ್ದೇನೆ. ಹೆತ್ತವರಲ್ಲ ಯಾರೇ ಬಂದರೂ ನಾನು ಯಾರನ್ನೂ ಭೇಟಿಯಾಗುವುದಿಲ್ಲ. ಸನ್ಯಾಸಿನಿಯಾಗಿಯೇ ನಾನು ಜೀವನಪರ್ಯಂತ ಇರಲು ನಿರ್ಧಾರ ಮಾಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿರುವುದು ಕಂಡುಬಂದಿದೆ. (ಎಂ.ಎನ್)

Leave a Reply

comments

Related Articles

error: