ಮನರಂಜನೆಮೈಸೂರು

ನಟ ಸುಬ್ಬಯ್ಯ ನಾಯ್ಡು ಅವರು ಕಲಾವಿದರಷ್ಟೇ ಅಲ್ಲದೇ, ಸಾಹಿತ್ಯಾಭಿಮಾನಿಯೂ ಆಗಿದ್ದರು : ನಟಿ ಗಿರಿಜಾಲೋಕೇಶ್ ಬಣ್ಣನೆ

'ಪ್ರಚಾರೋಪನ್ಯಾಸ ರಂಗಧ್ವನಿ' ಕಾರ್ಯಕ್ರಮ

ಮೈಸೂರು,ನ.20:-  ನಟ ಸುಬ್ಬಯ್ಯ ನಾಯ್ಡು ಅವರು ಕಲಾವಿದರಷ್ಟೇ ಅಲ್ಲದೇ, ಸಾಹಿತ್ಯಾಭಿಮಾನಿಯೂ ಆಗಿದ್ದರು ಎಂದು ರಂಗಭೂಮಿ ಕಲಾವಿದೆ. ಪ್ರಖ್ಯಾತ ನಟಿ ಗಿರಿಜಾಲೋಕೇಶ್ ಬಣ್ಣಿಸಿದರು.

ಅವರಿಂದು ಮಾನಸಗಂಗೋತ್ರಿಯ ಇಎಂಎಂಆರ್ ಸಿ ಸಭಾಂಗಣದಲ್ಲಿ  ಮೈಸೂರು ವಿಶ್ವವಿದ್ಯಾನಿಲಯ, ಗುಬ್ಬಿವೀರಣ್ಣ ರಂಗಪೀಠ, ಲಲಿತಕಲಾ ಕಾಲೇಜು ಹಾಗೂ ಪ್ರಸಾರಾಂಗ ಮಾನಸಗಂಗೋತ್ರಿ ಇದರ ಸಹಯೋಗದೊಂದಿಗೆ ‘ಪ್ರಚಾರೋಪನ್ಯಾಸ ರಂಗಧ್ವನಿ’ ಕಾರ್ಯಕ್ರಮದಲ್ಲಿ ‘ಧೀಮಂತ ನಟ ಸುಬ್ಬಯ್ಯ ನಾಯ್ಡು ಅವರ ಜೀವನ ಮತ್ತು ಸಾಧನೆ’ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಹೃದಯ  ಭಾಗಕ್ಕೆ ಬನ್ನಿ ಅಂತ ಕರೆದರು, ನನಗೆ ಹೃದಯವೇ ಬಾಯಿಗೆ ಬರ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದಾಗ ಸಭೆ ನಕ್ಕಿತು. ಇದೊಂದು ಪವಿತ್ರ ಸ್ಥಳ. ಎಷ್ಟೋ ಜನಕ್ಕೆ ಜ್ಞಾನ ನೀಡಿದೆ. ಎಷ್ಟೋ ಜನ ಇಲ್ಲಿ ಜ್ಞಾನವನ್ನು ಪಡೆದು ಸಮಾಜದಲ್ಲಿ ಸೇವೆ ಮಾಡುತ್ತಿದ್ದಾರೆ. ಮಾನಸಗಂಗೋತ್ರಿ ಹೆಸರೇ ಚನ್ನಾಗಿದೆ ಎಂದರು.

ನಾನು 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಸುಬ್ಬಯ್ಯ ನಾಯ್ಡು ಅವರು ತೀರಿಕೊಂಡರು. ಆ ಸುದ್ದಿಯನ್ನು ಕೇಳಿ ಅವರ ಪತ್ನಿಯೂ ತೀರಿಕೊಂಡರು ಎಂಬ ಸುದ್ದಿ ಬಂತು. ಗಂಡ ಹೆಂಡತಿ ಹೀಗೂ ಇರ್ತಾರಾ ಅನಿಸಿತ್ತು. ಆಗ ನಾನು ಹೇಳಿದ್ದೆ, ನನಗೆ ಮದುವೆ ಆಗಲಿ, ನನ್ನ ಗಂಡ ಸತ್ತು ಹೋಗಲಿ, ಆಗ ನಾನು ಸತ್ತು ಹೋಗುತ್ತೇನೆ ಎಂದು, ಆದರೆ ನನಗೆ ನಿಜವಾಗಿಯೂ ನಾನವರ ಮನೆಯ ಸೊಸೆಯಾಗಿ ಬರುತ್ತೇನೆಂದು  ಗೊತ್ತಿರಲಿಲ್ಲ. ಅದು ನನ್ನ ಸೌಭಾಗ್ಯ, ಸಾಹಿತ್ಯ ಸಾಮ್ರಾಜ್ಯವನ್ನು ಆಳಿಕೊಂಡು ಬಂದಿದ್ದೇನೆ ಎಂದು ಕಳೆದ ದಿನಗಳನ್ನು ಸ್ಮರಿಸಿದರು.

ಸುಬ್ಬಯ್ಯ ನಾಯ್ಡು ಅವರು ಅವರ ನಾಟಕದ ಕಂಪನಿಗೆ ಸಾಹಿತ್ಯ ಸಾಮ್ರಾಜ್ಯವೆಂದು ಹೆಸರಿಟ್ಟರು. ‘ಸರಸಿಜಭವೆ ಪರಿಪಾಲಿಸು ಪರಶಿವೆ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯ’  ಇದು ನಾಟಕ ಮಂಡಳಿಯ ನಾಂದಿಗೀತೆ ಆಗಿತ್ತು. ಅವರು ನಾಟಕ ಕಲಾವಿದರಷ್ಟೇ ಅಲ್ಲ. ಸಾಹಿತ್ಯಾಭಿಮಾನಿಗಳೂ ಕೂಡ ಹೌದು. ಅದಕ್ಕೆ ಅವರು ಸಾಹಿತ್ಯ ಸಾಮ್ರಾಜ್ಯ ಎಂದು ತನ್ನ ನಾಟಕ ಕಂಪನಿಗೆ ಹೆಸರಿಟ್ಟಿದ್ದರು ಎಂದು ತಿಳಿಸಿದರಲ್ಲದೇ, ಅವರ ಬಾಲ್ಯ ಜೀವನ ಹೇಗಿತ್ತು, ಅವರ ನಾಟಕದ ಮೇಲಿನ ಪ್ರೀತಿ ಹೇಗಿತ್ತು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ  ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ ಮೈಸೂರಿನಲ್ಲಿ ಹುಟ್ಟಿ ಬೆಳೆದಿರುವ ವ್ಯಕ್ತಿಗಳು ಸಮಾಜಕ್ಕೆ ಕೊಟ್ಟಿರುವ ಕೊಡುಗೆ ದೊಡ್ಡದು. ಪ್ರಜ್ಞಾವಂತ ಚಲನಶೀಲ ಸಮಾಜದಲ್ಲಿ  ಕಲೆ, ಸಂಸ್ಕೃತಿ, ನಾಟಕ, ಸಂಗೀತ ಇವೆಲ್ಲ ಸೂಚ್ಯಂಕಗಳು. ರಂಗಕಲೆಗೆ ತನ್ನದೇ ಆದ ಇತಿಹಾಸವಿದೆ. ಹಿರಿಯರ ಶ್ರಮವಿದೆ. ಸಮಾಜವೇ ಧ್ಯಾನ ಮಾಡಿದ ರೀತಿಯಲ್ಲಿ ಈ ಸಂಪ್ರದಾಯವನ್ನು ಸಂಸ್ಕೃತಿಯನ್ನು ನಮಗೆ ಬಿಟ್ಟು ಹೋಗಿದ್ದಾರೆ. ಸುಬ್ಬಯ್ಯ ನಾಯ್ಡು ಅವರು ಧೀಮಂತ ವ್ಯಕ್ತಿ. ಕರ್ನಾಟಕದ ಸಂಸ್ಕೃತಿ ಕಟ್ಟಿರುವವರು. ಅಡಿಗಲ್ಲು ಹಾಕಿದವರಲ್ಲಿ ದೊಡ್ಡ ಹೆಸರು. ಕರ್ನಾಟಕ ಸಾಂಸ್ಕೃತಿಕ ಚರಿತ್ರೆ ಕಟ್ಟುವಲ್ಲಿ ಅವರ ಪಾತ್ರ ಪ್ರಮುಖವಾದದ್ದು ಎಂದರು.

ನಟನೆ ಮೈಗೂಡಿಸಿಕೊಂಡು ಜನರ ನಾಡಿ ಮಿಡಿತ ತಲುಪಿ ಹೃದಯಗೆದ್ದವರು ಸುಬ್ಬಯ್ಯ ನಾಯ್ಡು .  ಗತವನ್ನು ಹೇಳುವುದೇ ನಟನೆ. ನಟನೆಗಿರುವ ಶಕ್ತಿ ಅಂತಹ ಮಹತ್ವದ್ದು. ಹಿಂದೆ ಹೀಗಿತ್ತು, ಈಗ ಹೀಗಿದೆ, ಮುಂದೆ ಹೀಗಿರಬೇಕು ಎಂಬ ಮೂರು ಆಯಾಮವನ್ನು ನಟನೆ ಒಳಗೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ, ಖ್ಯಾತ ನಟ ಮಂಡ್ಯ ರಮೇಶ, ಲಲಿತಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಿ.ರಾಮಸ್ವಾಮಿ, ನಟಿ ಪೂಜಾ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: