ಪ್ರಮುಖ ಸುದ್ದಿ

ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಪ್ರಶಸ್ತಿ ಪ್ರದಾನ : ಸಹಕಾರ ಸಂಘಗಳಿಗೆ ಇನ್ನಷ್ಟು ಸ್ವಾಯತ್ತತೆಯ ಅಗತ್ಯವಿದೆ : ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ

ರಾಜ್ಯ(ಮಡಿಕೇರಿ) ನ.20 :- ಸಹಕಾರ ಸಂಘಗಳು ರೈತರ ಬೆನ್ನುಲುಬಾಗಿದ್ದು, ಸಹಕಾರ ಸಂಘಗಳಿಗೆ ಇನ್ನೂ ಹೆಚ್ಚಿನ ಸ್ವಾಯತ್ತತೆ ನೀಡಬೇಕಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಪ್ರತಿಪಾದಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಭವನದಲ್ಲಿ ಬುಧವಾರ ನಡೆದ ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಮತ್ತು ಗಣಕೀಕರಣ ದಿನಾಚರಣೆ ಹಾಗೂ ಕೊಡಗು ಸಹಕಾರ ರತ್ನ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಸೇವಾ ಮನೋಭಾವ ಇದ್ದು, ರೈತರಿಗೆ ಹೆಚ್ಚಿನ ಸೇವೆ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಸಹಕಾರ ಬ್ಯಾಂಕುಗಳು ಸ್ವಾವಲಂಬಿ ಹಾಗೂ ಸದೃಢವಾಗಿದ್ದು ಸ್ವಾಯತ್ತತೆ ನೀಡಿದ್ದಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೆ.ಜಿ.ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಸಹಕಾರ ಬ್ಯಾಂಕುಗಳು ರೈತರಿಗೆ ಸಕಾಲದಲ್ಲಿ ಸಾಲ ನೀಡುತ್ತಿವೆ. ಅದೇ ರೀತಿ ಮರು ಪಾವತಿಯು ಸಹ ಆಗುತ್ತಿದೆ. ಸರ್ಕಾರ ಒಂದು ಲಕ್ಷ ರೂ. ವರೆಗೆ ರೈತರ ಸಾಲಮನ್ನಾ ಮಾಡಿದೆ. ಸಹಕಾರ ಕ್ಷೇತ್ರ ಸ್ವಾಯತ್ತತೆ ಇರುವಂತಾಗಲು ವೈದ್ಯನಾಥನ್ ಸಮಿತಿ ವರದಿ ಸಂಪೂರ್ಣ ಜಾರಿಯಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಸಲಹೆ ನೀಡಿದರು.
ಸರ್ಕಾರದ ಸೌಲಭ್ಯಗಳು ಜನರಿಗೆ ನೇರವಾಗಿ ತಲುಪಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ಸಹಕಾರ ಚಳುವಳಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಸಹಕಾರಿ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯ ಅನೇಕ ಹಿರಿಯರು ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ ಎಂದರು.
ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಶೇ,85 ಕ್ಕಿಂತ ಹೆಚ್ಚು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಆದ್ದರಿಂದ ಕೃಷಿ ಮತ್ತು ಸಹಕಾರಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಶಾಸಕರು ಹೇಳಿದರು.
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ಸಾಲ ನೀಡಲಾಗುತ್ತದೆ. ಇದನ್ನು ಬಳಸಿಕೊಳ್ಳುವಂತಾಗಬೇಕು ಎಂದರು.
ಸ್ತ್ರೀಶಕ್ತಿ ಗುಂಪುಗಳು ಸಹ ಸಹಕಾರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಅಖಿಲ ಭಾರತ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕು. ಇಂದಿನ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಖಾಸಗಿ ಕ್ಷೇತ್ರವನ್ನು ಎದುರಿಸಬೇಕು. ಸಹಕಾರ ಕ್ಷೇತ್ರ ಬೆಳೆದಷ್ಟು ರೈತರ ಶ್ರೇಯೋಭಿವೃದ್ಧಿ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರು ಹಾಗೂ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ ಅವರು ಮಾತನಾಡಿ ಜಿಲ್ಲಾ ಸಹಕಾರ ಯೂನಿಯನ್ ಮೂಲಕ ಶಿಕ್ಷಣ, ತರಬೇತಿ, ಮಾಹಿತಿ ನೀಡಲಾಗುತ್ತಿದೆ ಎಂದರು.
ಸಹಕಾರ ಸಂಘಗಳ ಬೆಳವಣಿಗೆಗೆ ಸಹಕಾರಿಗಳು ಶ್ರಮಿಸುತ್ತಿದ್ದಾರೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕೊಡಗು ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದಿದೆ. ಸಹಕಾರ ಕ್ಷೇತ್ರದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಮಾತನಾಡಿ ಸಹಕಾರ ಸಂಘ ಮತ್ತು ಸಹಕಾರ ಬ್ಯಾಂಕ್‍ಗಳು ಹತ್ತು ಸಾವಿರ ಕೋಟಿ ವಾರ್ಷಿಕ ವಹಿವಾಟು ನಡೆಸಿ ಬೃಹತ್ತಾಗಿ ಬೆಳೆದಿದೆ, ಕೊಡಗು ಸಹಕಾರಿ ಬ್ಯಾಂಕ್ ವಾಣಿಜ್ಯ ಹಾಗೂ ಖಾಸಗಿ ಬ್ಯಾಂಕ್‍ಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ ಎಂದರು.
ಮಾರ್ಚ್ 31 ರೊಳಗೆ ಎಲ್ಲ ಸಹಕಾರ ಬ್ಯಾಂಕ್ ಗಣಕೀಕರಣವಾಗುತ್ತದೆ, ಸಹಕಾರಿ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‍ಗಳು ಪ್ರವಾಹದ ಸಂದರ್ಭದಲ್ಲಿ ಪರಿಹಾರ ನಿಧಿ ನೀಡಿದೆ, ಸಾಲವನ್ನು ಪಡೆಯುವ ಮೂಲಕ ಸಹಕಾರಿ ಬ್ಯಾಂಕಿನ ಸೌಲಭ್ಯ ಪಡೆಯಬಹುದು. ರೈತರ ಬೆಳೆಗೆ ಒಳ್ಳೆಯ ನಿರ್ದಿಷ್ಟ ಬೆಲೆ ಒದಗಿಸುವುದು. ಕ್ರಿಮಿನಾಶಕ ಮತ್ತು ಗೊಬ್ಬರದ ದರದಲ್ಲಿ ರಿಯಾಯಿತಿ, ಮಧ್ಯವರ್ತಿಗಳಿಲ್ಲದೆ ಕೃಷಿಯ ಮಾರಾಟ ಮತ್ತು ರೈತರೆ ಬೆಳೆಯ ಬೆಲೆ ನಿರ್ಧಾರ ಮಾಡುವಂತಾದರೆ ಮಾತ್ರ ರೈತರ ಬೆಳವಣಿಗೆ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ನುಡಿದರು.
ಕೊಡಗು ಸಹಕಾರ ರತ್ನ ಪ್ರಶಸ್ತಿ ಪಡೆದ ಮಂಡುವಂಡ ಪಿ.ಮುತ್ತಪ್ಪ ಸಹಕಾರ ಕ್ಷೇತ್ರದಲ್ಲಿ ದುಡಿದವರು ವಿವಿಧ ಕ್ಷೇತ್ರದಲ್ಲಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ್ಲ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಸೇವಾ ಮನೋಭಾವವಿರುವ ಯುವ ಜನತೆ ಸಹಕಾರ ಕ್ಷೇತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಅವರು ಹೇಳಿದರು.
ಶ್ರೇಷ್ಠ ಸಹಕಾರಿ ಪ್ರಶಸ್ತಿ ಪಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ ಅವರು ಮಾತನಾಡಿ ಸಾಲ ಸೌಲಭ್ಯದಲ್ಲಿ ಹೆಚ್ಚಳ ಮತ್ತು ಕಡಿಮೆ ಬಡ್ಡಿ ದರದಲ್ಲಿ ಜನರಿಗೆ ಅನುಕೂಲವಾಗುವಂತೆ ಸಹಕಾರಿ ಬ್ಯಾಂಕುಗಳು ಸಹಕರಿಸಬೇಕು, ವೈದ್ಯನಾಥನ್ ವರದಿ ಜಾರಿಯಾದರೆ ಗ್ರಾಮೀಣ ಪ್ರದೇಶದ ಜನರಿಗೆ ಸೌಲಭ್ಯವಾಗುತ್ತದೆ ಎಂದು ಅವರು ಹೇಳಿದರು.
ಬಲ್ಯಮನೆ ಗಣಪತಿ ಅವರು ಮಾತನಾಡಿ ಸಹಕಾರ ಬ್ಯಾಂಕ್‍ಗಳು ಬೆಳೆ ನಾಶ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಾಲ ಮನ್ನಾ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವುದರಿಂದ ರೈತರಿಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಕೆ.ಪಿ.ನಾಗರಾಜು ಅವರು ಮಾತನಾಡಿ ಸಹಕಾರಿ ಬ್ಯಾಂಕ್‍ಗಳಿಗೆ ಸ್ಥಳೀಯ ಸಹಕಾರಿಗಳಿಂದ ಭದ್ರ ಬುನಾದಿಯನ್ನಿಡಲಾಯಿತು. ಹಿರಿಯರು ಕಟ್ಟಿದ ಸಂಸ್ಥೆಗೆ ದಕ್ಕೆ ಬಾರದಂತೆ ಸ್ಥಳಿಯ ಸಹಕಾರಿ ಸಂಘ ನಡೆಸಬೇಕು, ಫಲ ಅಪೇಕ್ಷಿಸದೆ ಜನರಿಗೆ ಸಹಾಯ ಮಾಡುವುದೆ ಗುರಿ ಮುಂದಿನ ಪೀಳಿಗೆಯವರಿಗೆ ಫಲ ಅಪೇಕ್ಷಿಸದೆ ಶುದ್ಧತೆಯಿಂದ ಸಂಘ ಕಾಪಾಡಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಉಪಾಧ್ಯಕ್ಷರಾದ ಕೆ.ಎಸ್.ಹರೀಶ್ ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷರಾದ ಪಿ.ಸಿ.ಅಚ್ಚಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರಾದ ಎಚ್.ಎಂ.ರಮೇಶ್, ರಘು ನಾಣಯ್ಯ, ಕನ್ನಂಡ ಸಂಪತ್, ಬಿ.ಕೆ.ಚಿಣ್ಣಪ್ಪ, ಕೆ.ಎ.ಜಗದೀಶ್, ಉಷಾ ತೇಜಸ್ವಿ, ಕೆ.ಅರುಣ್ ಭೀಮಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರಾದ ಎಂ.ಪ್ರೇಮ ಸೋಮಯ್ಯ, ಎಸ್.ಪಿ.ನಿಂಗಪ್ಪ, ಬಿ.ಎ.ರಮೇಶ್ ಚಂಗಪ್ಪ, ಪಿ.ಜಿ.ನಂಜುಂಡ, ಕೆ.ಎಂ.ತಮ್ಮಯ್ಯ, ಎನ್.ಎ.ರವಿಬಸಪ್ಪ, ಪಿ.ಸಿ.ರಾಮಚಂದ್ರ, ರವಿಕುಮಾರ್ ಎಚ್.ಡಿ. ಇತರರು ಇದ್ದರು. ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಗುರುಮಲ್ಲಪ್ಪ ಅವರು ಮಾತನಾಡಿದರು.
ಕೊಡಗು ಸಹಕಾರ ರತ್ನ ಪ್ರಶಸ್ತಿಯನ್ನು ಮಂಡುವಂಡ ಪಿ.ಮುತ್ತಪ್ಪ, ಶ್ರೇಷ್ಠ ಸಹಕಾರ ಪ್ರಶಸ್ತಿಯನ್ನು ಸಂಪಾಜೆಯ ಬಲ್ಯಮನೆ ಗಣಪತಿ, ಬೈರಂಬಾಡದ ಕೆ.ಪಿ.ನಾಗರಾಜು, ಕೊಡ್ಪಿಪೇಟೆಯ ಬಿ.ಕೆ.ಚಿನ್ನಪ್ಪ, ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ಲೀಲಾ ಮೇದಪ್ಪ ಅವರಿಗೆ ಪ್ರದಾನ ಮಾಡಲಾಯಿತು.
ಜಿಲ್ಲಾ ಸಹಕಾರ ಯೂನಿಯನ್‍ನ ಸಿಇಒ ಯೋಗೇಂದ್ರ ನಾಯಕ್ ನಿರೂಪಿಸಿದರು. ಕೊಡಪಾಲು ಗಣಪತಿ ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಮಂಜುಳಾ ಪ್ರಾರ್ಥಿಸಿದರು. ರವಿ ಬಸಪ್ಪ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: