ದೇಶಪ್ರಮುಖ ಸುದ್ದಿ

ಸೇನೆಯ ಪರಮಾಣು ಸಾಮರ್ಥ್ಯದ `ಪೃಥ್ವಿ -2’ಕ್ಷಿಪಣಿ ಪರೀಕ್ಷೆ ಯಶಸ್ವಿ  

ಬಾಲಸೋರ್‌,ನ.21-ಪರಮಾಣು ಸಾಮರ್ಥ್ಯ ಹೊಂದಿರುವ `ಪೃಥ್ವಿ -2’ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಒಡಿಶಾ ಕರಾವಳಿಯಲ್ಲಿ ನಿನ್ನೆ ರಾತ್ರಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ. ಸಂಜೆ 7 ರಿಂದ ಸಂಜೆ 7.15 ರವರೆಗೆ ಕ್ಷಿಪಣಿಯ ಪ್ರಯೋಗ ಮಾಡಲಾಗಿದೆ. ಸೇನೆಯ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ (ಎಸ್‌ಎಫ್‌ಸಿ) ಈ ಪರೀಕ್ಷೆ ನಡೆಸಿದ್ದು, ಡಿಆರ್‌ಡಿಒದ ವಿಜ್ಞಾನಿಗಳು ಪರೀಕ್ಷೆಯ ಮೇಲ್ವಿಚಾರಣೆ ವಹಿಸಿದ್ದರು.

ಎರಡು ಪೃಥ್ವಿ -2 ಕ್ಷಿಪಣಿಗಳನ್ನು ಸತತವಾಗಿ ಪರೀಕ್ಷಿಸಲಾಗಿದ್ದು, ಎರಡೂ ಪರೀಕ್ಷೆಗಳು ಯಶಸ್ವಿಯಾಗಿವೆ ಎಂದು ಚಂಡೀಪುರದಲ್ಲಿ ಐಟಿಆರ್‌ ಅಧಿಕಾರಿ ತಿಳಿಸಿದ್ದಾರೆ.

ಸೇನೆಯ ಪ್ರಯೋಗದ ಭಾಗವಾಗಿ ಭಾರತ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರಮಾಣು ಸಾಮರ್ಥ್ಯದ ಮೇಲ್ಮೈಯಿಂದ ಮೇಲ್ಮೈಗೆ ಪೃಥ್ವಿ -2 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ. ಐಟಿಆರ್‌ನ ಲಾಂಚ್ ಕಾಂಪ್ಲೆಕ್ಸ್ -3 ಮೊಬೈಲ್ ಲಾಂಚರ್‌ನಿಂದ 350 ಕಿ.ಮೀ ನಷ್ಟು ದೂರದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಯಶಸ್ವಿ ಪ್ರಯೋಗ ನಡೆಸಲಾಗಿದೆ. 500-1,000 ಕೆಜಿ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಪೃಥ್ವಿ -2 ಹೊಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಹಿಂದೆ ಫೆಬ್ರವರಿ 21, 2018ರಲ್ಲಿ ರಾತ್ರಿಯ ವೇಳೆಯಲ್ಲೇ ಐಟಿಆರ್‌ನಲ್ಲಿ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು. (ಎಂ.ಎನ್)

Leave a Reply

comments

Related Articles

error: