ಕರ್ನಾಟಕಪ್ರಮುಖ ಸುದ್ದಿ

ಪತ್ರಕರ್ತ ಮಂಜುನಾಥ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ: ಸಿಎಂ ಘೋಷಣೆ

ಬೆಂಗಳೂರು,ನ.21-ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲಾ ಹಿರಿಯ ವರದಿಗಾರ ಎಂ.ಸಿ.ಮಂಜುನಾಥ್‌ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಮಂಜುನಾಥ್ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಎಸ್ವೈ ಅವರು, ಮಂಜುನಾಥ್ ಅವರ ಅಕಾಲಿಕ ನಿಧನದಿಂದ ಒಬ್ಬ ಯುವ, ಉತ್ಸಾಹಿ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಬುಧವಾರ ರಾತ್ರಿ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲಾ ಪ್ರಜಾವಾಣಿ ವರದಿಗಾರ ಎಂ.ಸಿ.ಮಂಜುನಾಥ ಅವರ ಶವವನ್ನು ಟಾಟಾ ಏಸ್ ವಾಹನದಲ್ಲಿ, ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸಾಗಿಸಿರುವುದು ಖಂಡಿಸಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ.

ಪತ್ರ ಹೀಗಿದೆ:

ಮಾನ್ಯರೇ,

ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲಾ ಪ್ರಜಾವಾಣಿ ವರದಿಗಾರ ಎಂ.ಸಿ.ಮಂಜುನಾಥ ಅವರ ಶವವನ್ನು ಟಾಟಾ ಏಸ್ ವಾಹನದಲ್ಲಿ, ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸಾಗಿಸಿರುವುದು ಮಾನವಂತವರ ಹೃದಯ ಕದಡಿದೆ. ಈ ಘಟನೆ ಅತ್ಯಂತ ನೋವಿನ ಮತ್ತು ನಾಚಿಕೆಗೇಡಿನ ಹಾಗೂ ಖಂಡನಾರ್ಹ ಸಂಗತಿ.

ಎರಡು ವರ್ಷದ ಹಿಂದೆ ಹೀಗೆ ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಮೌನೇಶ ಅವರ ಶವವನ್ನು ಲಾರಿಯಲ್ಲಿ ಸಾಗಿಸಿದ್ದು, ತಲೆತಗ್ಗಿಸುವ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆದದ್ದು ಕಳವಳಕಾರಿ ಸಂಗತಿ. ಇಬ್ಬರು ಪತ್ರಕರ್ತರ ಸಾವಿನ ಸಂದರ್ಭದ ಘಟನೆಗಳು ಪೊಲೀಸ್ ವ್ಯವಸ್ಥೆ ತಮಗೆ ತಾವೇ ಮಾಡಿಕೊಂಡ ಅವಮಾನ.

ಸಾವು, ಒಂದು ಗೌರವ, ಘನತೆ ಬಯಸುತ್ತದೆ. ಸಾವನ್ನು ಅವಮಾನಿಸಿದ ಘಟನೆಗೆ ಕಾರಣರಾದವರ ಮೇಲೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು. ಮುಂದೆ ಯಾವುದೇ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಗೃಹ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಬೇಕು.

ಶಿವಾನಂದ ತಗಡೂರು,
ಅಧ್ಯಕ್ಷರು,
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ), ಬೆಂಗಳೂರು. (ಎಂ.ಎನ್)

 

Leave a Reply

comments

Related Articles

error: