ಪ್ರಮುಖ ಸುದ್ದಿಮೈಸೂರು

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ   ತೊಡೆ ತಟ್ಟಿ, ಹುಣಸೂರು ಕ್ಷೇತ್ರ ಗೆಲ್ಲಲು ತಂತ್ರ ರೂಪಿಸುತ್ತಿದ್ದಾರೆ ಸಚಿವ ಶ್ರೀರಾಮುಲು

ಮೈಸೂರು, ನ.22:- ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ  ಸಚಿವ ಶ್ರೀರಾಮುಲು ತೊಡೆ ತಟ್ಟಿದ್ದಾರೆ.  ಹುಣಸೂರು ಬೈ ಎಲೆಕ್ಷನ್‍ನಲ್ಲಿ ಬಿಜೆಪಿ ಉಸ್ತುವಾರಿಯಾಗಿರುವ ಅವರು  ಸಿದ್ದರಾಮಯ್ಯ ಅಖಾಡದಲ್ಲೇ   ಮತಬೇಟೆಯಾಡುತ್ತಿದ್ದಾರೆ.  ಮೈಸೂರಲ್ಲಿ ಕೂಡ  ಬಾದಾಮಿ ರೀತಿಯಲ್ಲೇ ಫೈಟ್  ನಡೆಯುವುದು ಖಚಿತವಾಗಿದೆ.  ಬಾದಾಮಿಯಲ್ಲಿ ಚುನಾವಣೆ ಬಳಿಕ ಸಿದ್ದರಾಮಯ್ಯ ವಿರುದ್ಧ ರಾಮುಲು ಸೋಲನುಭವಿಸಿದ್ದರು. ಅಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಾಮುಲು ಈಗ ಸಿದ್ದರಾಮಯ್ಯ ವಿರುದ್ಧ  ತಂತ್ರ ರೂಪಿಸುತ್ತಿದ್ದಾರೆ.

ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಗೆಲ್ಲಿಸಲು ಸಚಿವ ಶ್ರೀರಾಮುಲು  ಹೋರಾಟಕ್ಕೆ ಇಳಿದಿದ್ದಾರೆ.  ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪರಮ ಶಿಷ್ಯ ಎಚ್.ಪಿ. ಮಂಜುನಾಥ್ ಗೆಲ್ಲಿಸಲು ಪಣ ತೊಟ್ಟಿದ್ದು,  ಈ ನಡುವೆ ಇವರಿಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.   ಶ್ರೀರಾಮುಲುಗೆ  ಬಾದಾಮಿ  ಸೋಲಿನ ಸಿಟ್ಟು ಕಡಿಮೆ ಆದಂತೆ ಕಾಣುತ್ತಿಲ್ಲ. ಹೀಗಾಗಿ, ಇಬ್ಬರು ಇಲ್ಲಿ ಮತ್ತೆ ತಾವೇ ಅಭ್ಯರ್ಥಿಗಳು ಎಂಬಂತೆ ಕಾದಾಟಕ್ಕೆ ಇಳಿದಿದ್ದಾರೆ

ಹುಣಸೂರಿನಲ್ಲೇ ಬೀಡುಬಿಟ್ಟಿರುವ ಶ್ರೀರಾಮುಲು ತಮ್ಮ ಸಮುದಾಯದ ಮತಗಳ ಸೆಳೆಯುತ್ತಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ನಾಯಕ ಸಮುದಾಯದ ಸುಮಾರು 35 ಸಾವಿರ ಮತಗಳಿದ್ದು,  ಈ ಮತಗಳಲ್ಲಿ ಬಹುಪಾಲು ಮತಗಳು ಬಿಜೆಪಿಗೆ ಬಂದರೆ ಅದು ಬಿಜೆಪಿ ಅಭ್ಯರ್ಥಿಗೆ ದೊಡ್ಡ ಶಕ್ತಿ. ತಮ್ಮ ಸಮುದಾಯದ ಮತಗಳ ಸೆಳೆಯುವ ಮೂಲಕ ರಾಮುಲು ತಮ್ಮ ಅಭ್ಯರ್ಥಿ ಗೆಲುವಿನ ಹಾದಿ ಹಿಡಿಯುವಂತೆ ಮಾಡಿ ತಾವು ನಾಯಕ ಸಮುದಾಯದ ದೊಡ್ಡ ನಾಯಕ ಅಂತ ಮತ್ತೆ ಸಾಬೀತು ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಶ್ರೀರಾಮುಲು   ನಿಮಗೆ ಶಕ್ತಿ ಇದ್ದರೆ ಮತ್ತೆ ಚುನಾವಣೆಗೆ ಬನ್ನಿ ಅಂತ ಸಿದ್ದರಾಮಯ್ಯನವರಿಗೆ  ಸವಾಲ್ ಹಾಕುತ್ತಿದ್ದಾರೆ.  ಶ್ರೀರಾಮುಲು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಾದಾಮಿ ಸೇಡು ತೀರಿಸಿ ಕೊಳ್ತಾರಾ? ಅಥವಾ ಸಿದ್ದರಾಮಯ್ಯ ತಮ್ಮ ಶಿಷ್ಯನನ್ನು ಗೆಲ್ಲಿಸುವ  ಮೂಲಕ ಶ್ರೀರಾಮುಲುಗೆ ಮತ್ತೆ ಮುಖ ಭಂಗ ಮಾಡ್ತಾರಾ  ಎಂಬುದು ಡಿ.9ರಂದು ತಿಳಿದು ಬರಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: