
ಪ್ರಮುಖ ಸುದ್ದಿಮೈಸೂರು
ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ : ಎಲ್ಲ ಆಯಾಮಗಳಿಂದ ತನಿಖೆ ನಡೆಸಲು ನಗರದಲ್ಲಿ ಬೀಡು ಬಿಟ್ಟಿರುವ ಗುಪ್ತದಳ ಸಂಸ್ಥೆ
ಮೈಸೂರು,ನ.22:- ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸುವ ಸಂಬಂಧ ನಗರ ಪೊಲೀಸರೊಂದಿಗೆ ಕೈಜೋಡಿಸಿರುವ ಗುಪ್ತದಳ ಸಂಸ್ಥೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ನಗರದಲ್ಲಿ ಬೀಡು ಬಿಟ್ಟಿದ್ದಾರೆ.
ಬುಧವಾರವೇ ನಗರಕ್ಕೆ ಓರ್ವ ಡಿಸಿಪಿ ಮತ್ತು ಎಸ್ಪಿ ದರ್ಜೆಯ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದು ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಶಾಸಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿ ಫರ್ಹಾನ್ ವಿಚಾರಣೆ ವೇಳೆ ವಿಶೇಷ ತಂಡ ಅಧಿಕಾರಿಗಳೊಂದಿಗೆ ಗುಪ್ತದಳದ ಅಧಿಕಾರಿಗಳು ಜತೆಗಿದ್ದು ಆರೋಪಿಗೆ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸಂಘಟನೆಗಳ ಸದಸ್ಯರು ನಡೆದುಕೊಳ್ಳುವ ರೀತಿ ಅವರು ನೀಡುವ ಉತ್ತರಗಳ ಬಗ್ಗೆ ತಮ್ಮ ಅನುಭವವನ್ನು ತನಿಖಾ ತಂಡದ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ
ಆರೋಪಿ ಫರ್ಹಾನ್ ಯಾರ ಜೊತೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದು ಅವರನ್ನು ಕೂಡ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಶಾಸಕರ ಮೇಲೆ ಹಲ್ಲೆ ನಡೆದ ದಿನ ಮತ್ತು ಹಿಂದಿನ ದಿನ ಫರ್ಹಾನ್ 30ಕ್ಕೂ ಹೆಚ್ಚು ಜನರೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.
ಶಾಸಕ ತನ್ವೀರ್ ಸೇಠ್ ಕೊಲೆ ಪ್ರಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಚ್ಚರಿ ಎಂದರೆ ಹಿಂದೂ ಮುಖಂಡ ರಾಜು ಕೊಲೆಗೂ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣಕ್ಕೂ ಲಿಂಕ್ಇದೆ ಎನ್ನುವ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.
ರಾಜು ಕೊಲೆಯ ಪ್ರಮುಖ ಆರೋಪಿ ಅಬೀದ್ ಪಾಷ ಈ ಪ್ರಕರಣದ ಮಾಸ್ಟರ್ ಮೈಂಡ್ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಬೀದ್ ಪಾಷಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಲ ಮಹತ್ವದ ಮಾಹಿತಿ ಲಭ್ಯವಾಗಿದೆ.
ಮೈಸೂರಿನಲ್ಲಿ ಪಿಎಫ್ಐನ 30 ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎನ್ನುವ ವಿಚಾರವನ್ನು ಅಬೀದ್ ಪಾಷಾ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಒಂದು ತಂಡದಲ್ಲಿ 15 ಜನರಂತೆ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕಾರಣಿಗಳು, ಧರ್ಮಗುರುಗಳು, ಗಣ್ಯ ವ್ಯಕ್ತಿಗಳೇ ಇವರ ಟಾರ್ಗೆಟ್.
ರಾಜು ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಅಬೀದ್ ಪಾಷಾ ಜೈಲಿನಿಂದ ಹೊರಬಂದಿದ್ದ. ಸದ್ಯ, ಅಬೀದ್ ಪಾಷಾ ಜೊತೆ 5 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ದಿನ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ತನ್ವೀರ್ ಸೇಠ್ ಕೊಲೆಗೆ ಈ ಹಿಂದೆಯೂ ಅಬೀದ್ ಪಾಷಾ ಪ್ರಯತ್ನ ನಡೆಸಿದ್ದ. ಆದರೆ, ಎರಡು ಮೂರು ಬಾರಿ ಆತ ವಿಫಲನಾಗಿದ್ದ. ಮುಸ್ಲಿಮರೇ ಹೆಚ್ಚಿರುವ ಸ್ಥಳದಲ್ಲಿ ಕೊಲೆ ನಡೆಸಲು ಸ್ಕೆಚ್ ಹಾಕುತ್ತಿದ್ದ. ಮೈಸೂರಿನ ಮಿಲಾದ್ ಪಾರ್ಕ್ ಬಳಿಯೂ ತನ್ವೀರ್ ಕೊಲೆಗೆ ಯತ್ನ ನಡೆಸಿ ಫೇಲ್ ಆಗಿದ್ದ. ಕೊಲೆ ಮಾಡಲು ಪ್ರಯತ್ನ ನಡೆಸಿದ್ದ ಫರ್ಹಾನ್ ಪಾಷಾಗೆ ಅಬೀದ್ ಪಾಷಾ ಟ್ರೈನಿಂಗ್ ನೀಡಿದ್ದ. ತೀವ್ರ ವಿಚಾರಣೆ ನಡೆಸಿದ ನಂತರ ಫರ್ಹಾನ್ ಈ ಬಗ್ಗೆ ಮಾಹಿತಿ ನೀಡಿದ್ದು, ಅಬೀದ್ ಪಾಷಾ ಜೊತೆ ಅಕ್ರಂ, ನೂರಾ ಖಾನ್, ಮುಜೀಬ್ ಹಾಗೂ ಮುಜಾಮಿಲ್ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)