ಪ್ರಮುಖ ಸುದ್ದಿ

ಪ್ರತಿಭಟನೆಗೆ ಸೋಮವಾರಪೇಟೆ ತಾಲೂಕು ದಲಿತಪರ ಒಕ್ಕೂಟ ಬೆಂಬಲ

ರಾಜ್ಯ( ಮಡಿಕೇರಿ) ನ.23 : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದೇಶದ ಸಂವಿಧಾನದ ಗೌರವಕ್ಕೆ ದಕ್ಕೆ ತರುವವರ ವಿರುದ್ಧ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಹಾಗೂ ಸಂವಿಧಾನ ರಕ್ಷಣಾ ಸಮಿತಿಯಿಂದ ನ.25 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಇದಕ್ಕೆ ಸೋಮವಾರಪೇಟೆ ತಾಲ್ಲೂಕು ದಲಿತ ಒಕ್ಕೂಟ ಬೆಂಬಲ ನೀಡಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆ.ಎಲ್.ಜನಾರ್ಧನ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಮತ್ತು ವಿಚಾರಧಾರೆಗಳನ್ನು ಅರಿಯದೆ ವಾಸ್ತವಾಂಶಗಳನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿದೆ. ಸಂವಿಧಾನದ ಗಟ್ಟಿತನವನ್ನು ಸಹಿಸದ ಮನುವಾದಿಗಳು ಸಂವಿಧಾನವನ್ನೇ ಬದಲಾಯಿಸುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸಬಲತೆಯನ್ನು ನೀಡಿದ್ದು, ಇದರ ಪರಿಣಾಮವಾಗಿ ಇಂದು ಎಲ್ಲಾ ಭಾರತೀಯರು ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಆದರೂ ಮನುವಾದಿಗಳು ನಿರಂತರವಾಗಿ ಡಾ.ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಲಘುವಾಗಿ ಕಾಣುತ್ತಲೇ ಬಂದಿದ್ದಾರೆ ಎಂದು ಟೀಕಿಸಿದ್ದಾರೆ. ಜನರು ಎಚ್ಚೆತ್ತುಕೊಳ್ಳುವ ಕಾಲ ಸಮೀಪಿಸಿದ್ದು, ಎಲ್ಲಾ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸಂವಿಧಾನ ವಿರೋಧಿ ನಿಲುವುಳ್ಳ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು, ಶಿಕ್ಷಣ ಇಲಾಖೆಯ ತಪಿತಸ್ಥ ಮೇಲಾಧಿಕಾರಿಗಳನ್ನು ವಜಾಗೊಳಿಸಬೇಕು, ಸಿಎಂಸಿಎ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನೆ ಮೂಲಕ ಒತ್ತಾಯಿಸುವುದಾಗಿ ಜನಾರ್ಧನ್ ಹೇಳಿದ್ದಾರೆ.
(ಕೆಸಿಐ,ಎಸ್.ಎಚ್)

Leave a Reply

comments

Related Articles

error: