ದೇಶಪ್ರಮುಖ ಸುದ್ದಿ

ಮಹಾರಾಷ್ಟ್ರ ಸರ್ಕಾರ ಭವಿಷ್ಯ: ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ,ನ.25-ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟಿನ ಕುರಿತು ಸೋಮವಾರ ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್ ನಾಳೆಗೆ (ನ.26) ತೀರ್ಪು ಕಾಯ್ದಿರಿಸಿದೆ.

ಮಹಾರಾಷ್ಟ್ರದಲ್ಲಿನ ರಾಷ್ಟ್ರಪತಿ ಆಡಳಿತವನ್ನು ಏಕಾಏಕಿ ಅಂತ್ಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಸರ್ಕಾರ ರಚನೆ ಮಾಡಲು ಬಿಜೆಪಿಗೆ ಅವಕಾಶ ನೀಡಿದ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ನಾಳೆ ಬೆಳಿಗ್ಗೆ 10.30ಕ್ಕೆ ತೀರ್ಪು ಕಾಯ್ದಿರಿಸಿದೆ.

ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಾಳೆಗೆ ತೀರ್ಪನ್ನು ಕಾಯ್ದಿರಿಸಿದೆ.

ಇದಕ್ಕೂ ಮುನ್ನ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪರ ವಕೀಲರು ವಾದ ಪ್ರತಿವಾದಗಳನ್ನು ಮಂಡಿಸಿದರು. ಹಿರಿಯ ವಕೀಲ ಕಪಿಲ್‌ ಸಿಬಲ್‌ ಕಾಂಗ್ರೆಸ್‌ ಪರವಾಗಿ, ಮಾಜಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ಫಡಣವೀಸ್‌ ಪರ ವಾದಿಸಿದರು. ಅಜಿತ್ ಪವಾರ್ ಪರವಾಗಿ ವಕೀಲ ಮಣಿಂದರ್ ಸಿಂಗ್ ವಾದ ಮಂಡನೆ ಮಾಡಿದರು. ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ತುಷಾರ್ ಮೆಹ್ತಾ ವಾದಿಸಿದರು.

ತುಷಾರ್ ಮೆಹ್ತಾ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ದೇವೇಂದ್ರ ಫಡ್ನವಿಸ್ ಅವರು ಮೊನ್ನೆ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಸಲ್ಲಿಸಿದ್ದ ಪತ್ರ ಮತ್ತು ರಾಜ್ಯಪಾಲರ ಪತ್ರವನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿ ವಾದ ಮಂಡಿಸಿದರು.

ಇಂದು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯಪಾಲರು ಶಿವಸೇನೆ, ಬಿಜೆಪಿ ಮತ್ತು ಎನ್ ಸಿಪಿ ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಅವರು ಸರ್ಕಾರ ರಚಿಸಲು ವಿಫಲವಾದ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲಾಯಿತು. ಸರ್ಕಾರ ರಚಿಸಲು ಯಾವ ಪಕ್ಷಕ್ಕೆ ಎಷ್ಟು ಶಾಸಕರ ಬೆಂಬಲವಿದೆ ಎಂದು ರಾಜ್ಯಪಾಲರು ನೋಡಿಕೊಂಡು ಕುಳಿತುಕೊಳ್ಳಬೇಕಾಗಿಲ್ಲ. ರಾಜ್ಯಪಾಲರು ಅಕ್ಟೋಬರ್ 24ರಿಂದ ನವೆಂಬರ್ 9ರವರೆಗೆ ಕಾದಿದ್ದರು. ಆದರೆ ಯಾವುದೇ ಪಕ್ಷಗಳು ಸರ್ಕಾರ ರಚನೆಗೆ ಮುಂದೆ ಬಂದಿರಲಿಲ್ಲ. ಈಗಿರುವ ಪ್ರಶ್ನೆಯೆಂದರೆ ಪಕ್ಷವೊಂದು ಬಂದು 24 ಗಂಟೆಯೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಹೇಳಿ ಎಂದು ಕೋರ್ಟ್ ನ ಮಧ್ಯಪ್ರವೇಶವನ್ನು ಕೇಳುತ್ತಿರುವುದು ಎಷ್ಟು ಸರಿ ಎಂದು ವಾದ ಮಂಡಿಸಿದರು.

ಗವರ್ನರ್ ಅವರು ದೇವೇಂದ್ರ ಫಡ್ನವಿಸ್ ಅವರಿಗೆ ನೀಡಿದ್ದ ಮಾಹಿತಿಯಂತೆ ಎನ್ ಸಿಪಿಯ 54 ಶಾಸಕರು ಹಾಗೂ ಬಿಜೆಪಿಯ 105 ಶಾಸಕರು ಸೇರಿದಂತೆ ಒಟ್ಟು 170 ಶಾಸಕರ ಬೆಂಬಲವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿಯು ಶಿವಸೇನೆ ಮೈತ್ರಿಯೊಂದಿಗೆ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿತ್ತಾದರೂ, ಸೇನಾದ ಅನಿರೀಕ್ಷಿತ ನಡೆಯಿಂದಾಗಿ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು. ನಂತರ, ಮೂರೂ ಪಕ್ಷಗಳು (ಬಿಜೆಪಿ, ಶಿವಸೇನೆ, ಎನ್‌ಸಿಪಿ) ಸರ್ಕಾರ ರಚನೆ ಮಾಡದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು.

ಹೀಗಾಗಿ, ಸರ್ಕಾರ ರಚನೆ ಮಾಡಲು ನಮಗೆ ಸೂಕ್ತ ಕಾಲವಕಾಶ ನೀಡಿಲ್ಲ ಎಂದು ಆರೋಪಿಸಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಈಗಾಗಲೇ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಈ ನಡುವೆಯೇ ನ.23 ರಂದು ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಎನ್‌ಸಿಪಿಯ ಒಂದು ಬಣದ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಸಿಪಿಯ ಅಜಿತ್‌ ಪವಾರ್‌ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ.

ಆದರೆ, ರಾಜ್ಯದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ದೀಢರ್‌ ಅಂತ್ಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಆತುರಾತುರವಾಗಿ ದೇವೇಂದ್ರ ಫಡಣವೀಸ್‌ ಅವರಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ ರಾಜ್ಯಪಾಲರ ನಡೆಯನ್ನು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ. ನಾಳಿನ ತೀರ್ಪು ಮಹಾರಾಷ್ಟ್ರ ರಾಜಕೀಯವನ್ನು ಮತ್ತಷ್ಟೂ ಕೌತುಕಭರಿತವಾಗಿ ಮಾಡಿದೆ. (ಎಂ.ಎನ್)

 

Leave a Reply

comments

Related Articles

error: