ಮೈಸೂರು

ಮಾಲ್ ಆಫ್ ಮೈಸೂರ್ ನಿಂದ ಪಾಲಿಕೆಗೆ ಭಾರೀ ತೆರಿಗೆ ವಂಚನೆ : ಬೀಗ ಜಡಿಯುವ ಸಾಧ್ಯತೆ ?

ಮೈಸೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ರೇಸ್ ಕೋರ್ಸ್ ಎದುರಿನ ಮಾಲ್ ಆಫ್ ಮೈಸೂರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ನೋಟೀಸ್ ನೀಡಿದ್ದು, ದಾಖಲೆಗಳನ್ನು ಪರಿಶೀಲಿಸಿದರು. ಪಾಲಿಕೆಯ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾಲ್ ಆಫ್ ಮೈಸೂರ್ ಗೆ ಸಂಜೆಯ ವೇಳೆಗೆ  ಬೀಗ ಜಡಿಯುವ ಎಲ್ಲ ಸಾಧ್ಯತೆಗಳೂ ಗೋಚರಿಸಿವೆ.

ಮಾಲ್ ಆಫ್ ಮೈಸೂರಿಗೆ ಪಟ್ಟಣ ಮತ್ತು ನಗರಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಾಲ್ ಆಫ್ ಮೈಸೂರು ಮಾಲಿಕರು ಪಾವತಿಸಬೇಕಾದ ತೆರಿಗೆಯನ್ನು ಸರಿಯಾಗಿ ಸಂದಾಯ ಮಾಡಿಲ್ಲ ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲದೇ ಅವರು ಒಂದು ಮಲ್ಟಿಪ್ಲೆಕ್ಸ್ ನಿರ್ಮಿಸಿ ಒಂದು ಪ್ರದರ್ಶನ ನೀಡುತ್ತೇವೆ ಎಂದಿದ್ದು, ಪ್ರತಿದಿನ ನಾಲ್ಕು ಪ್ರದರ್ಶನ ನೀಡಲಾಗುತ್ತಿದೆ. ಆದರೆ ಪಾಲಿಕೆಗೆ ಒಂದು ಪ್ರದರ್ಶನದ ತೆರಿಗೆಯನ್ನು ಮಾತ್ರ ನೀಡಲಾಗುತ್ತಿದ್ದು, ಪಾಲಿಕೆಯ ನಿಯಮವನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ಐದು ಕೋಟಿರೂ.ಗೂ ಹೆಚ್ಚಿನ ತೆರಿಗೆ ವಂಚನೆ ನಡೆದಿದ್ದು, ಮಲ್ಟಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿ ಮಲ್ಟಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೇ ಪಾಲಿಕೆಗೆ ವಂಚಿಸಿದ್ದಾರೆ. ಈ ಹಿಂದೆ ಪಾಲಿಕೆ ಎರಡು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಅದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ನಿರ್ಲಕ್ಷ್ಯ ಭಾವನೆ ತಳೆದಿದ್ದರು ಎನ್ನಲಾಗಿದೆ.

ವಾಹನ ನಿಲುಗಡೆಗೆ ಸಂಬಂಧಿಸಿದಂತೆ 350 ವಾಹನ ನಿಲುಗಡೆಗೆ ಅವಕಾಶ ನೀಡುತ್ತೇವೆಂದು ಅನುಮತಿ ಪಡೆದಿದ್ದು, ಕೇವಲ 150 ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ತರಾಟೆಗೆ ತೆಗೆದುಕೊಂಡ ನಂದೀಶ್ ಪ್ರೀತಂ ನೀವು ಪಾಲಿಕೆಯ ಸಂಪೂರ್ಣ ನಿಯಮವನ್ನು ಗಾಳಿಗೆ ತೂರಿದ್ದೀರಿ. ಪಾಲಿಕೆಯ ಯಾವುದೇ ನಿಯಮಗಳನ್ನು ನೀವು ಪಾಲಿಸಿಲ್ಲ. ಅಷ್ಟೇ ಅಲ್ಲದೇ ತೆರಿಗೆಯನ್ನೂ ಕಟ್ಟದೇ ವಂಚಿಸಿದ್ದೀರಿ. ಇವರ ಮೇಲೆ ಕಾನೂನುಬದ್ಧವಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವೋ ಎಲ್ಲವನ್ನೂ ಕೈಗೊಳ್ಳಿ ಎಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಾಲಿಕೆಯ ಅಧಿಕಾರಿಗಳು ಪಾಲಿಕೆಯ ಆ್ಯಕ್ಟ್ ಪ್ರಕಾರ ತೆರಿಗೆಯನ್ನು ಸಂದಾಯ ಮಾಡಿ. ನೀವು 2010ನೇ ಇಸವಿಯಿಂದಲೂ ಪಾಲಿಕೆಗೆ ವಂಚಿಸುತ್ತಲೇ ಬಂದಿದ್ದೀರಿ. ಈ ದಿನ ಪಾಲಿಕೆಯ ಅವಧಿಯ ವೇಳೆ ನೀವು ಬಾಕಿ ಇರಿಸಿಕೊಂಡ ಎಲ್ಲ ತೆರಿಗೆಗಳನ್ನೂ ಪಾವತಿಸಬೇಕು. ಇಲ್ಲದಿದ್ದಲ್ಲಿ ಸಂಜೆಯ ವೇಳೆ ನಾವೇ ಬೀಗ ಜಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಂದೀಶ್ ಪ್ರೀತಂ ಜೊತೆ ಪಾಲಿಕೆ ಸದಸ್ಯೆ ವನಿತಾ ಪ್ರಸನ್ನ, ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

comments

Related Articles

error: