
ಕರ್ನಾಟಕಪ್ರಮುಖ ಸುದ್ದಿ
ಉಡುಪಿ ಕೃಷ್ಣಮಠದಲ್ಲಿ ಸಕ್ಕರೆ, ಮೈದಾ ನಿಷೇಧ
ಉಡುಪಿ,ನ.25- ಉಡುಪಿ ಶ್ರೀ ಕೃಷ್ಣಮಠದಲ್ಲಿ ಇನ್ನು ಮುಂದೆ ಸಕ್ಕರೆ ಹಾಗೂ ಮೈದಾ ಬಳಸಿ ತಯಾರಿಸಿದ ಪ್ರಸಾದ- ಖಾದ್ಯಗಳನ್ನು ನಿಷೇಧಿಸಲಾಗಿದೆ.
ಖಾದ್ಯಗಳ ತಯಾರಿಗೆ ಸಕ್ಕರೆ ಹಾಗೂ ಮೈದಾವನ್ನು ನಿಷೇಧಿಸುವಂತೆ ಪರ್ಯಾಯ ಪಲಿಮಾರು ಶ್ರೀಗಳು ಮಠದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಸಕ್ಕರೆ ಹಾಗೂ ಮೈದಾ ಬದಲಿಗೆ ಬೆಲ್ಲ ಹಾಗೂ ಕಡ್ಲೆ ಹಿಟ್ಟು, ಗೋಧಿ ಹಿಟ್ಟನ್ನು ಬಳಸಲು ಸೂಚಿಸಿದ್ದಾರೆ.
ಯೋಗಗುರು ಬಾಬಾ ರಾಮ್ದೇವ್ ಅವರು ಸಕ್ಕರೆ ಮತ್ತು ಮೈದಾ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಇದರ ಬಳಕೆ ತ್ಯಜಿಸಿ ಎಂದಿದ್ದರು. ಹೀಗಾಗಿ ಶ್ರೀಗಳು ಈ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಪರ್ಯಾಯವಾಗಿ ಬೆಲ್ಲದ ಬಳಕೆ ಹೆಚ್ಚು ಮಾಡಲಾಗುತ್ತದೆ. ಸಕ್ಕರೆ ಹಾಗೂ ಮೈದಾ ಬಳಸದ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಕೃಷ್ಣ ಮಠದಲ್ಲಿ ಮೋಹನ್ ಲಾಡು ಹಾಗೂ ಪಂಚಕಜ್ಜಾಯ ಪ್ರಸಾದಕ್ಕೆ ನಿತ್ಯ 1 ಕ್ವಿಂಟಾಲ್ಗೂ ಅಧಿಕ ಸಕ್ಕರೆ ಬಳಸಲಾಗುತ್ತದೆ. 50 ಕೆಜಿ ಮೈದಾ ಬೇಕಾಗುತ್ತದೆ. ಆದರೆ ಕಳೆದ 1 ವಾರದಿಂದ ಕಡ್ಲೆ ಹಿಟ್ಟಿನಿಂದ ಮಾಡಿದ ಕಾಳು ಲಾಡು ಹಾಗೂ ಬೆಲ್ಲ ಬಳಸಿದ ಪಂಚಕಜ್ಜಾಯ ಪ್ರಸಾದವನ್ನು ಪ್ರಾಯೋಗಿಕವಾಗಿ ವಿತರಿಸಲಾಗುತ್ತಿದೆ.
ಇತ್ತೀಚೆಗೆ ಶ್ರೀಕೃಷ್ಣಮಠದಲ್ಲಿ ಯೋಗ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ರಾಮ್ ದೇವ್ ಅವರು ಸಕ್ಕರೆ, ಮೈದಾವನ್ನು ತ್ಯಜಿಸುವಂತೆ ಸೂಚಿಸಿದ್ದರು. (ಎಂ.ಎನ್)