ದೇಶಪ್ರಮುಖ ಸುದ್ದಿ

ಸಿಂಧೂ ನದಿ ವಿವಾದ : ಲಾಹೋರ್ ಸಭೆಗೆ ಭಾರತ ಆಹ್ವಾನ

ನವದೆಹಲಿ : ಇದೇ ತಿಂಗಳು ಪಾಕಿಸ್ತಾನದ ಲಾಹೋರ್‍’ನಲ್ಲಿ ನಡೆಯಲಿರುವ ಶಾಶ್ವತ ಸಿಂಧೂ ಆಯೋಗದ ಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನದಿಂದ ಭಾರತಕ್ಕೆ ಅಧಿಕೃತ ಆಹ್ವಾನ ಬಂದಿದೆ. ಭಾರತ ಈ ಸಭೆಯಲ್ಲಿ ಭಾಗವಹಿಸಲಿದ್ದು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಸಂಬಂಧ ಉಂಟಾಗಿರುವ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಒಪ್ಪಂದಕ್ಕೆ ತಿದ್ದುಪಡಿ ತರುವುದು ಅಥವಾ ಪರ್ಯಾಯ ವ್ಯವಸ್ಥೆ ಜಾರಿಗೊಳಿಸಲು ಒಪ್ಪುವುದಿಲ್ಲ ಎಂದು ಪಾಕಿಸ್ತಾನ ದೃಢವಾಗಿ ಹೇಳಿದೆ. ಸಿಂಧೂ ನದಿ ನೀರಿನ ಒಪ್ಪಂದದಡಿ ಕಿಶನ್ ಗಂಗಾ ಮತ್ತು ರಾಲ್ಟೆ ಯೋಜನೆಗಳ ಕುರಿತು ಈಗಿರುವ ಭಿನ್ನಾಭಿಪ್ರಾಯಗಳನ್ನು  ಬಗೆಹರಿಸಲು ಸಿದ್ಧರಿದ್ದೇವೆ ಎಂದು ಭಾರತ ಹೇಳಿದೆ. ಆದರೆ ಭಾರತ ನಿರ್ಮಿಸುತ್ತಿರುವ ಕಿಶನ್ ಗಂಗಾ, ರಾಟ್ಲೆ ಹೈಡ್ರೋ ಎಲೆಕ್ಟ್ರಿಕ್ ಘಟಕಗಳಿಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ಶಾಶ್ವತ ಸಿಂಧೂ ಆಯೋಗವು ದ್ವಿಪಕ್ಷೀಯ ಆಯೋಗವಾಗಿದ್ದು, ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಅದರಲ್ಲಿದ್ದಾರೆ. ಸಿಂಧೂ ನದಿ ನೀರು ಒಪ್ಪಂದದ ಉದ್ದೇಶಗಳನ್ನು ನಿರ್ವಹಿಸಿ ಜಾರಿಗೊಳಿಸಲು ಈ ಆಯೋಗವನ್ನು ರಚಿಸಲಾಗಿದೆ. ಪಾಕಿಸ್ತಾನಕ್ಕೆ ಹರಿಯುವ ನೀರು ತಡೆಯಲಾಗುವುದು ಎಂದು ಪ್ರಧಾನಮಂತ್ರಿ ಕಳೆದ ತಿಂಗಳು ಬೆದರಿಕೆ ಹಾಕಿದ ನಂತರ ನೀರಿನ ವಿವಾದ ಕುರಿತು ಆತಂಕ ಹೆಚ್ಚಾಗಿದೆ. 1960ರ ಸಿಂಧೂ ನದಿ ನೀರು ಒಪ್ಪಂದ ಕುರಿತ ವಿವಾದವನ್ನು ಬಗೆಹರಿಸಲು ಪರ್ಯಾಯ ಮಾರ್ಗವನ್ನು ಕಂಡುಹಿಡಿಯುವಂತೆ ವಿಶ್ವಬ್ಯಾಂಕ್ ಈ ಹಿಂದೆ ಭಾರತ ಮತ್ತು ಪಾಕಿಸ್ತಾನಕ್ಕೆ ಸೂಚಿಸಿತ್ತು.

ಭಾರತದ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಪಾಕಿಸ್ತಾನ ಅಧ್ಯಕ್ಷ ಅಯೂಬ್ ಖಾನ್  ಮಾಡಿಕೊಂಡ ಒಪ್ಪಂದದ ಪ್ರಕಾರ, ಪೂರ್ವ ಭಾಗದಲ್ಲಿರುವ ಮೂರು ನದಿಗಳಾದ ಸಿಂಧೂ ಜಲಾನಯನ, ಬಿಯಾಸ್, ರಾವಿ ನದಿಗಳ ಮೇಲೆ ಭಾರತಕ್ಕೆ ಹತೋಟಿಯಿದ್ದರೆ ಪಶ್ಚಿಮ ಪ್ರಾಂತ್ಯಗಳಲ್ಲಿರುವ ಸಿಂಧೂ, ಚೆನಾಬ್ ಮತ್ತು ಝೀಲಂ ಮೇಲೆ ಪಾಕಿಸ್ತಾನ ನಿಯಂತ್ರಣ ಹೊಂದಿದೆ. ಒಪ್ಪಂದ ಮಾಡಿಕೊಂಡ ಪ್ರಕಾರ, ಸಿಂಧೂ ನದಿಯ ಒಟ್ಟು ನೀರಿನಲ್ಲಿ ಶೇಕಡಾ 20 ರಷ್ಟು ಭಾಗವನ್ನು ಮಾತ್ರ ಭಾರತ ಉಪಯೋಗಿಸಬಹುದಾಗಿದೆ.

Leave a Reply

comments

Related Articles

error: