ಪ್ರಮುಖ ಸುದ್ದಿಮೈಸೂರು

ಚಾಕು ಇರಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ತನ್ವೀರ್ ಸೇಠ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮೈಸೂರು,ನ.26:- ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ  ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಶಾಸಕ ತನ್ವೀರ್ ಸೇಠ್ ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ಶಾಸಕ ತನ್ವೀರ್ ಸೇಠ್ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಇದೀಗ ಗುಣಮುಖರಾಗಿದ್ದು, ಸೋಮವಾರ ಅವರು ಆಸ್ಪತ್ರೆಯಿಂದ ಡಿಸ್‌ ಚಾರ್ಜ್ ಆಗಿ ಮನೆಗೆ ತೆರಳಿದರು ಎಂದು ಅವರಿಗೆ ಚಿಕಿತ್ಸೆ ನೀಡಿದ ಡಾ.ಉಪೇಂದ್ರ ಶೆಣೈ ಮಾಹಿತಿ ನೀಡಿದ್ದಾರೆ.

ಸೋಮವಾರ ಶಾಸಕರನ್ನು ಭೇಟಿ ಯಾಗಲು ಆಸ್ಪತ್ರೆಗೆ ಬಂದಿದ್ದ ಸಾರ್ವಜನಿಕರು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನಿರಾಸೆ ಮಾಡದ ತನ್ವೀರ್ ಸೇಠ್ ಎಲ್ಲರಿಗೂ ಕೈಮುಗಿದು ವಂದಿಸಿದರು. ತನ್ನ ಆರೋಗ್ಯ ಸುಧಾರಣೆ ಆಗುತ್ತಿದೆ, ಆದಷ್ಟು ಬೇಗ ಕ್ಷೇತ್ರಕ್ಕೆ ಬರುವುದಾಗಿ ಸನ್ನೆ ಮೂಲಕ ಭರವಸೆ ನೀಡುತ್ತಿದ್ದರು.

ಕೊಲೆ ಯತ್ನ ಪ್ರಕರಣದ ವಿಚಾರಣೆ ನಡೆಸುತ್ತಿರುವ ಡಿಸಿಪಿ ಎಂ.ಮುತ್ತುರಾಜು ನೇತೃತ್ವದ ತನಿಖಾ ತಂಡವು ಪ್ರಕರಣದ ಪ್ರಮುಖ ಆರೋಪಿ ಫರ್ಹಾನ್ ಪಾಷಾನ ಕುಟುಂಬದವರನ್ನು   ಪತ್ತೆ ಮಾಡಿ, ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದಾರೆ. ಫರ್ಹಾನ್ ದೈನಂದಿನ ಚಟುವಟಿಕೆಗಳ ಬಗ್ಗೆ ಪೋಷಕರು ಮತ್ತು ಸೋದರರಿಂದ ಮಾಹಿತಿ ಕಲೆ ಹಾಕಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

ವಿಚಾರಣೆ ಮುಗಿಸಿಕೊಂಡು ಹೊರಬಂದ ಫರ್ಹಾನ್ ಪೋಷಕರು ಮತ್ತು ಕುಟುಂಬದವರು, ಮತ್ತೆ ಮನೆಗೆ ಹಿಂದಿರುಗಿದರೆ ಸಮಸ್ಯೆಯಾಗಲಿದೆ ಎಂಬ ಭಯದಿಂದ ಸ್ನೇಹಿತರು ಮತ್ತು ಬಂಧುಗಳ ಮನೆಗೆ ತೆರಳಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು, ಬೇರೆ ಯಾರಾದರೂ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಎಲ್ಲಾ ದಿಕ್ಕಿನಲ್ಲಿಯೂ ತನಿಖೆ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: