ಮೈಸೂರು

‘ಅಲ್ಲಮ ಎಂದರೆ ಅಜ್ಞಾನವನ್ನು ಗೆದ್ದವನು’ : ಶ್ರೀ ನಿರಂಜನ ಪ್ರಣವಸ್ವರೂಪಿ ಶ್ರೀಕಂಠ ಸ್ವಾಮಿ

ಮೈಸೂರು,ನ.26:- ಶ್ರೀ ನಟರಾಜ ಪ್ರತಿಷ್ಠಾನದ ವತಿಯಿಂದ ಶ್ರೀ ನಟರಾಜ ಸಭಾಭವನದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ಅಲ್ಲಮ ಪ್ರಭು–ಮಾನವೀಯ ಮೌಲ್ಯದರ್ಶನ” ಎಂಬ ವಿಷಯವನ್ನು ಕುರಿತು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಮುಡಗುಂಡ ವಿರಕ್ತ ಮಠದ ಶ್ರೀ ನಿರಂಜನ ಪ್ರಣವಸ್ವರೂಪಿ ಶ್ರೀಕಂಠ ಸ್ವಾಮಿಗಳ  ದಿವ್ಯ ಸಾನಿಧ್ಯದಲ್ಲಿ ಏರ್ಪಡಿಸಲಾಗಿತ್ತು. ಆಶೀರ್ವಚನ ನೀಡಿದ  ಅವರು ‘ಅಲ್ಲಮ ಎಂದರೆ ಅಜ್ಞಾನವನ್ನು ಗೆದ್ದವನು’ ಎಂದರ್ಥ. ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠದ ಸೂರ್ತಿಯಾಗಿದ್ದರು ಅಲ್ಲಮ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ವಿಜಯಕುಮಾರಿ ಎಸ್. ಕರಿಕಲ್ ಮಾತನಾಡಿ  ಶರಣರಲ್ಲೆ ಅತೀ ಶ್ರೇಷ್ಠನಾದವನು ಅಲ್ಲಮ. ಆತನ ವಚನಗಳನ್ನು ಅರ್ಥೈಸಿಕೊಳ್ಳುವುದು ಅಷ್ಟೊಂದು ಸುಲಭವಾದುದಲ್ಲ ಆತನ ವಚನಗಳು ವಿಸ್ತೃತವಾದವುಗಳು. ಅಲ್ಲಮ ಒಬ್ಬ ದಾರ್ಶನಿಕ. ದಾರ್ಶನಿಕವಾಗಿ ನಿಂತು ಎಲ್ಲರನ್ನು ಪರೀಕ್ಷಿಸುತ್ತಿದ್ದ. ಮುಕ್ತಾಯಕ್ಕ, ಗೊಗ್ಗಯ್ಯ ಸಿದ್ದರಾಮ, ಬಸವಣ್ಣನವರನ್ನು ಓರೆಹಚ್ಚಿದ ಮಹಾದಾರ್ಶನಿಕ.

ಶರಣರ ಪ್ರಕಾರ ಮಾನವೀಯತೆ- ಮಾನವತೆ ಎನ್ನುವ ಪದಗಳ ನಡುವೆ ವ್ಯತ್ಯಾಸವಿದೆ. ಅವರ ಪ್ರಕಾರ ಮಾನವ ಪ್ರಕೃತಿಯ ಒಂದು ಭಾಗ . ಮನುಷ್ಯನ ಸಾಮರ್ಥ್ಯ ಮಿತಿಗಳ ಅರಿವು ಇರುವುದೇ ಮಾನವತೆ. ಮಾನವೀಯತೆ ಎಂದರೆ ಪ್ರೀತಿ, ವಾತ್ಸಲ್ಯ, ಸಹಬಾಳ್ವೆಯ ಸಂಕೇತವಾಗಿದ್ದು ಹಿಂಸೆಗೆ ವಿರುದ್ಧವಾಗಿರುವುದು ಎಂದರ್ಥ.

ಅಲ್ಲಮ ಒಬ್ಬ ಅದ್ವೈತವಾದಿ. ಆತನ ಪ್ರಕಾರ ಪಂಚಭೂತಗಳಿಂದ ಬಂದ ಈ ಶರೀರ ಪಂಚಭೂತಗಳಲ್ಲೆ ಲೀನವಾಗುತ್ತದೆ ಎಂದು ಹೇಳುವ ಮೂಲಕ ತಮ್ಮ ಸಿದ್ದಾಂತವನ್ನು ಪ್ರತಿಪಾದಿಸುತ್ತಾರೆ. ಹೊನ್ನು, ಹೆಣ್ಣು, ಮಣ್ಣು ಮಾಯೆ ಎನ್ನುವರು. ಹೊನ್ನು, ಹೆಣ್ಣು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಎನ್ನುವ ಮಾತಿನಲ್ಲಿ ಶರಣನಾದವನು ಮೊದಲು ಮನಸ್ಸನ್ನು ಗೆಲ್ಲಬೇಕು. ಆಗ ಮಾತ್ರ ಅವನು ಆಸೆಯನ್ನು ಗೆಲ್ಲಬಹುದು ಎಂಬ ಅಲ್ಲಮ ಪ್ರಭುವಿನ ವಚನಗಳ ಅರ್ಥ ವೈಶಿಷ್ಟ್ಯತೆ ತಿಳಿಸಿದರು. ಅಲ್ಲಮ ಒಬ್ಬ ನಿರ್ಭೀತ ವ್ಯಕ್ತಿತ್ವವುಳ್ಳವನು. ಆತ ವರ್ತಮಾನಕ್ಕೆ ಪ್ರಾಧಾನ್ಯತೆ ಕೊಟ್ಟು ಅದರಂತೆ ನಡೆದವನು. ಸಮಾಜದಲ್ಲಿ ವಿರಕ್ತನಂತೆ ಬದುಕಿದ್ದರೂ ಸಮಾಜದ ಬಗ್ಗೆ ಕಳಕಳಿಯುಳ್ಳವನಾಗಿದ್ದ ಎಂದರು.

ಈ ಸಂದರ್ಭ  ಮೈಸೂರು ಮತ್ತು ಸಂಸ್ಥೆಯ ಎಲ್ಲಾ ಮುಖ್ಯಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.(ಎಸ್.ಎಚ್)

Leave a Reply

comments

Related Articles

error: