ಪ್ರಮುಖ ಸುದ್ದಿಮೈಸೂರು

ಸಿದ್ಧರಾಮಯ್ಯ ಮೂರು ವರ್ಷಗಳ ಕಾಲ ವಿಪಕ್ಷ ಸ್ಥಾನದಲ್ಲೇ ಇರಬೇಕು : ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು

ಮೈಸೂರು,ನ.26:- ರಾಜ್ಯದಲ್ಲಿ ಉಪಚುನಾವಣೆಯ ನಂತರ ಬಿಜೆಪಿ ಸರ್ಕಾರ ಪತನವಾಗಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಎಂ ಬಿಎಸ್ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಸಿದ್ಧರಾಮಯ್ಯ ಮೂರು ವರ್ಷಗಳ ಕಾಲ ವಿಪಕ್ಷ ಸ್ಥಾನದಲ್ಲೇ ಇರಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆಂದು ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಆದರೆ ಜನರಿಗೆ ಮಧ್ಯಂತರ ಚುನಾವಣೆ ಬೇಡವಾಗಿದೆ. ಹೀಗಾಗಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇಲ್ಲ. ಸಿದ್ಧರಾಮಯ್ಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಿದ್ದರಾಮಯ್ಯ ಮೂರು ವರ್ಷ ವಿಪಕ್ಷ ನಾಯಕನಾಗಿಯೇ ಇರಬೇಕು ಎಂದು ನುಡಿದರು.

ಬಿಜೆಪಿ ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ. ಇದನ್ನು ಪ್ರಚಾರಕ್ಕಾಗಿ ಹೇಳುತ್ತಿಲ್ಲ. ಅಳೆದು ತೂಗಿ ಹೇಳ್ತಿದ್ದೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಗೆ ಪುಟ್ಟಣ್ಣ ಅವರೇ ಬಿಜೆಪಿ ಅಭ್ಯರ್ಥಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದರು.

ಪುಟ್ಟಣ್ಣ ಮೂರು ಬಾರಿ ಜೆಡಿಎಸ್‌ ನಿಂದ  ಪ್ರತಿನಿಧಿಸಿದ್ದರು. ಪುಟ್ಟಣ್ಣ ಗೆಲ್ಲುವ ಅಭ್ಯರ್ಥಿ ಹೀಗಾಗಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡ್ತಿದ್ದೇನೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಪುಟ್ಟಣ್ಣ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಪುಟ್ಟಣ್ಣ ಅವರನ್ನು ಜೆಡಿಎಸ್ ನಿಂದ ಉಚ್ಚಾಟನೆ ಮಾಡಲಾಗಿದ್ದು ಶೀಘ್ರವೇ ಬಿಜೆಪಿ ಸೇರ್ಪಡೆಯಾಗುವುದಾಗಿ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಹುಳಿಮಾವು ಕೆರೆಕೋಡಿ ಒಡೆದ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಇಂದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತೇನೆ. ಪ್ರಕರಣದಲ್ಲಿ ಅಧಿಕಾರಗಳ ನಿರ್ಲಕ್ಷ್ಯ ಕಾಣುತ್ತಿದೆ. ಇದರ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ತಪ್ಪಿಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ. ಕೆರೆಗಳು ತುಂಬಿದಾಗ ಅದನ್ನು ಪರಿಶೀಲನೆ ನಡೆಸುವುದು ಅಧಿಕಾರಿಗಳ ಕರ್ತವ್ಯ. ಆ ಕರ್ತವ್ಯದಲ್ಲಿ ಲೋಪ ಉಂಟಾದಂತೆ ಕಾಣುತ್ತಿದೆ. ನಾನು ಸ್ಥಳ ಪರಿಶೀಲನೆ ಮಾಡಿ ಪರಿಶೀಲನೆ ಮಾಡುತ್ತೇನೆ ಎಂದರು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್ ನಾಗೇಂದ್ರ, ನಂದೀಶ್ ಪ್ರೀತಂ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: