ಪ್ರಮುಖ ಸುದ್ದಿವಿದೇಶ

ಇಸಿಸ್ ಉಗ್ರರ ಮಟ್ಟ ಹಾಕಿದ ಇರಾಕ್‍ ಸೇನೆ : ಮೊಸೂಲ್ ನಗರ ವಶ

ಬಾಗ್ದಾದ್ : ಯುದ್ಧ ಪೀಡಿತ ಇರಾಕ್‍ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಕೊನೆಗೂ ತನ್ನ ಸೋಲು ಒಪ್ಪಿಕೊಂಡಿದೆ. ಉಗ್ರರ ಕಪಿಮುಷ್ಠಿಯಿಂದ ಪಾರಾಗುವಲ್ಲಿ ಇರಾಕ್ ದೇಶ ಅಂತಿಮವಾಗಿ ಬಹುತೇಕ ಸಫಲವಾಗಿದ್ದು, ಇರಾಕ್‍ನ ಬಹುತೇಕ ಭಾಗಗಳನ್ನು ಆಕ್ರಮಿಸಿಕೊಂಡಿದ್ದ ಇಸಿಸ್ ಉಗ್ರರು, ಇದೀಗ ನಿಧಾನವಾಗಿ ಅಲ್ಲಿಂದ ಕಾಲ್ಕೀಳುತ್ತಿದ್ದಾರೆ.

ಉಗ್ರರ ವಿರುದ್ಧ ಹೋರಾಟದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದ ಅಮೆರಿಕ ನೇತೃತ್ವದ ಮೈತ್ರೀಕೂಟ ಇದೀಗ ಇರಾಕ್ ಅನ್ನು ಬಹುತೇಕ ತನ್ನ ವಶಕ್ಕೆ ಪಡೆಯುತ್ತಿದೆ. ಇಸ್ಲಾಮಿಕ್ ಉಗ್ರ ಸಂಘಟನೆಯ ಕೇಂದ್ರಸ್ಥಾನವಾಗಿದ್ದ ಮೊಸೂಲ್ ನಗರದಿಂದಲೇ ಉಗ್ರರು ಪಲಾಯನ ಮಾಡುತ್ತಿದ್ದು, ಉಗ್ರ ಸಂಘಟನೆಯ ಸೋಲನ್ನು ಬಿಂಬಿಸುತ್ತಿದೆ. ಮೊಸೂಲ್ ನಗರವೀಗ ಸಂಪೂರ್ಣವಾಗಿ ಸೇನಾಪಡೆಗಳ ತೆಕ್ಕೆಗೆ ಬಂದಿದೆ.

ಸೇನೆ ಮುನ್ನಡೆ ಸಾಧಿಸುತ್ತಿದ್ದಂತೆ ಸಂಘಟನೆಯ ಕೆಲ ಕಮಾಂಡರ್​’ಗಳು ಕಾಲ್ಕಿತ್ತಿದ್ದಾರೆ. ಮತ್ತೆ ಕೆಲವರು ಸುರಂಗಗಳು ಮತ್ತು ಬಂಕರ್‍ಗಳಲ್ಲಿ ಅಡಗಿಕೊಂಡಿದ್ದಾರೆ. ಇರಾಕ್ ಪ್ರಧಾನಿ ಹೈದರ್‍ ಅಲಿ ಅಬಾದಿ ಅವರು ಮೂರು ತಿಂಗಳೊಳಗಾಗಿ ದೇಶದಿಂದ ಐಸಿಸ್ ನಿರ್ಮೂಲನೆ ಮಾಡುವುದಾಗಿ ಕಳೆದ ಜನವರಿಯಲ್ಲಿ ಆಶ್ವಾಸನೆ ನೀಡಿದ್ದರು.

ಬ್ರಿಟನ್ ರಕ್ಷಣಾ ಸಚಿವ ಮೈಕಲ್ ಫಾಲೋನ್ ಕೂಡ ಕೆಲ ದಿನಗಳ ಹಿಂದಷ್ಟೇ ಮಾಧ್ಯಮಗಳೊಂದಿಗೆ ಮಾತನಾಡುತ್ತಾ 2017ರ ಅಂತ್ಯದೊಳಗಾಗಿ ಐಸಿಸ್ ಇರಾಕ್‍​ನ ಪ್ರಮುಖ ನಗರಗಳಿಂದ ಕಾಲು ಕೀಳಲಿದೆ ಎಂದಿದ್ದರು. ಕಳೆದ ಬುಧವಾರ ಅಮೆರಿಕನ್ ಕಾಂಗ್ರೆಸ್ ಅ​ನ್ನು ಉದ್ದೇಶಿಸಿ ಮೊದಲ ಭಾಷಣ ಮಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಐಸಿಸ್ ಅ​ನ್ನು ಅಂತ್ಯಗೊಳಿಸಲು ನಾವು ಸಿದ್ಧರಾಗಿದ್ದೇವೆ ಎಂದಿದ್ದರು.

ಇರಾಕ್ ಸೇನಾಪಡೆಗಳ ಪ್ರಬಲ ದಾಳಿಯಿಂದಾಗಿ ಹಿಮ್ಮೆಟ್ಟಿರುವ ಇಸಿಸ್ ಉಗ್ರರು, ಸಿರಿಯಾದತ್ತ ಮುಖ ಮಾಡಿದ್ದಾರೆ. ಪ್ರಮುಖವಾಗಿ ಸಿರಿಯಾ ಸೋಲಿನ ಬೆನ್ನಲ್ಲೇ ಸಂಘಟನೆ ಮುಖ್ಯಸ್ಥ ಬಾಗ್ದಾದಿ ಭಾಷಣದ ಬಳಿಕ ಉಗ್ರರೆಲ್ಲರೂ ರಣರಂಗದಿಂದ ಕಾಲ್ಕೀಳುತ್ತಿದ್ದು, ಬೆಟ್ಟಗುಡ್ಡಗಳನ್ನು ಆಶ್ರಯಿಸಿದ್ದಾರೆ. ಇನ್ನೂ ಹಲವು ಉಗ್ರರು ಸಿರಿಯಾದತ್ತ ಪಯಣ ಬೆಳೆಸಿರುವುದರಿಂದ ಆ ದೇಶದಲ್ಲಿನ ಆತಂಕ ಹೆಚ್ಚಾಗುವಂತೆ ಮಾಡಿದೆ.

ಇರಾಕ್‍ನಲ್ಲಿ  ಇಸಿಸ್ ತನ್ನ ಪ್ರಾಬಲ್ಯ ಕಳೆದುಕೊಂಡಿರಬಹುದು. ಆದರೆ ಸಿರಿಯಾದಲ್ಲಿ ಹಿಂಸೆ ಇನ್ನೂ ಮುಂದವರೆಯಲಿದ್ದು, ಪ್ರಸ್ತುತ ಇರಾಕ್‍ನಿಂದ ಪಲಾಯನಗೈಯ್ಯುತ್ತಿರುವ ಉಗ್ರರು ಸಿರಿಯಾದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸ್ಥಳೀಯ ಬಂಡುಕೋರರು ಇಸಿಸ್ ಉಗ್ರರಿಗೆ ಆಶ್ರಯ ನೀಡುತ್ತಿದ್ದು, ಸಿರಿಯಾ ಸರ್ಕಾರಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಸಿರಿಯಾದಲ್ಲಿ ಈಗಾಗಲೇ ಉಗ್ರರ ಅಡಗುದಾಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಉಗ್ರರು ಸಿರಿಯಾ ದಾರಿ ಹಿಡಿದಿದ್ದಾರೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply

comments

Related Articles

error: