ಮೈಸೂರು

ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ : ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ ವಂಟಿಗೊಡಿ

ಮೈಸೂರು,ನ.26:- ನಮ್ಮ ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ ವಂಟಿಗೊಡಿ ತಿಳಿಸಿದರು.

ಅವರು ಇಂದು ಬೆಳಿಗ್ಗೆ ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಕಾಲೇಜಿನ ಪಿ.ಎಂ. ಚಿಕ್ಕಬೋರಯ್ಯ ಸಭಾಂಗಣದಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜು, ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಯಾವುದೇ ದೇಶದಲ್ಲಿನ ಪ್ರಜೆಗಳು ಸಮಾನರು. ಅವರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವುದನ್ನು ನಮ್ಮ ಸಂವಿಧಾನವು ಎತ್ತಿ ಹಿಡಿದಿರುವುದರಿಂದ ಇದು ವಿಶ್ವಖ್ಯಾತಿಯನ್ನುಗಳಿಸಿದೆ ಎಂದರು.

ನಮ್ಮ ಸಂವಿಧಾನದಲ್ಲಿ ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಬಗ್ಗೆಯೂ ಉಲ್ಲೇಖಿಸಿರುವುದರಿಂದ ದೇಶದ ಪ್ರತಿಯೊಬ್ಬರೂ ತಮ್ಮ ಮೂಲಭೂತ ಹಕ್ಕುಗಳನ್ನು ಹೊಂದಲು ಆರ್ಹರಾಗಿರುತ್ತಾರೆ. ನಮ್ಮ ಪಾರ್ಲಿಮೆಂಟ್ ಸುಪ್ರೀಂ ಅಲ್ಲ. ಬದಲಾಗಿ ನಮ್ಮ ಸಂವಿಧಾನ ಸುಪ್ರೀಂ ಆಗಿರುವುದಕ್ಕೆ ಇದೇ ಅಂಶ ಪ್ರಮುಖ ಕಾರಣ ಎಂದು ಅವರು ಇಂತಹ ಮಹಾನ್ ಗ್ರಂಥವನ್ನು ದೇಶದ ಪ್ರತಿಯೊಬ್ಬರೂ ಗೌರವಿಸಬೇಕೆಂದರು.

ಈ ಹಿಂದೆ ಸಂವಿಧಾನ ದಿನವನ್ನು ಬಾರ್ ಅಸೋಸಿಯೇಷನ್‍ನಲ್ಲಿ ಆಚರಿಸಲಾಗುತ್ತಿತ್ತು. ಇದರಿಂದ ಸಂವಿಧಾನದ ಮಹತ್ವ ಕೇವಲ ವಕೀಲರು ಹಾಗೂ ನ್ಯಾಯಾಧೀಶರಿಗೆ ಮಾತ್ರ ತಿಳಿಯುವಂತಾಗಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರವು ಇತ್ತೀಚೆಗೆ ಸಂವಿಧಾನ ದಿನವನ್ನು ರಾಷ್ಟ್ರದ ಎಲ್ಲಾ ಶಾಲಾ-ಕಾಲೇಜುಗಳಲ್ಲಿಯೂ ಆಚರಿಸಬೇಕೆಂದು ಆದೇಶ ಹೊರಡಿಸುವುದರ ಮೂಲಕ ವಿದ್ಯಾರ್ಥಿಗಳೂ ಸಂವಿಧಾನದ ಮಹತ್ವ ತಿಳಿಯುವಂತಾಗಿದೆ. ನಮ್ಮಲ್ಲಿ ಮೊಟ್ಟಮೊದಲ ಬಾರಿಗೆ ಸಂವಿಧಾನ ದಿನಾಚರಣೆಯನ್ನು 26-11-1949ರಲ್ಲಿ ಆಚರಿಸಲಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ-ಕಾರ್ಯದರ್ಶಿ  ಬಿ.ಪಿ. ದೇವಮಾನೆ, ಮೈಸೂರು ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಆನಂದ ಕುಮಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಹಾಗೂ ಕಾನೂನು ಶಾಸ್ತ್ರವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಧಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: