
ದೇಶ
ತಂಡಕ್ಕೆ ಮೊದಲ ಆದ್ಯತೆ: ಸಂಜು ಸ್ಯಾಮ್ಸನ್
ನವದೆಹಲಿ,ನ.28- ವೆಸ್ಟ್ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಜು ಸ್ಯಾಮ್ಸನ್, ವೈಯಕ್ತಿಕ ಮೈಲುಗಲ್ಲಿಗಿಂತಲೂ ತಂಡಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ತಂಡಕ್ಕಾಗಿ ಏನೇ ಮಾಡಲು ಸಿದ್ಧವಿದ್ದೇನೆ ಎಂದಿದ್ದಾರೆ.
ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲು ತಯಾರಿರುವುದಾಗಿ ತಿಳಿಸಿದ ಸಂಜು ಸ್ಯಾಮ್ಸನ್, ಕಳೆದ ಐದು ಆರು ವರ್ಷಗಳಲ್ಲಿ ವೈಟ್ ಬಾಲ್ ಕ್ರಿಕೆಟ್ನಲ್ಲಿ ನಾನು ಕೇರಳಕ್ಕಾಗಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದೇನೆ. ರಣಜಿ ಟ್ರೋಫಿಯಲ್ಲೂ ಕೀಪಿಂಗ್ ಮಾಡಿದ್ದೇನೆ. ತಂಡಕ್ಕಾಗಿ ಏನೇ ಮಾಡಲು ಸಿದ್ಧವಿದ್ದೇನೆ. ಐಪಿಎಲ್ನಲ್ಲೂ ತಂಡ ಬಯಿಸಿದಾಗ ಕೀಪಿಂಗ್ ಮಾಡಿದ್ದೇನೆ. ಹಾಗಾಗಿ ಓರ್ವ ವಿಕೆಟ್ ಕೀಪರ್ ಹಾಗೂ ಫೀಲ್ಡರ್ ಆಗಿಯೂ ಸಜ್ಜಾಗುತ್ತಿದ್ದೇನೆ ಎಂದರು.
ನಾನು ವಿಕೆಟ್ ಕೀಪಿಂಗ್ ಬಯಸುತ್ತಿಲ್ಲ ಎಂಬ ವಾದ ಸರಿಯಲ್ಲ. ಟೀಮ್ ಮ್ಯಾನೇಜ್ಮೆಂಟ್ನಲ್ಲಿ ಚರ್ಚಿಸಿದ ವಿಷಯಗಳನ್ನು ನಾನು ಬಹಿರಂಗಪಡಿಸುವಂತಿಲ್ಲ. ತಂಡ ಬಯಸಿದಾಗ ವಿಕೆಟ್ ಕೀಪಿಂಗ್ ಹಾಗೆಯೇ ಫೀಲ್ಡಿಂಗ್ ಮಾಡಲು ಬಯಸಿದಾಗ ಅದನ್ನು ಮಾಡಿದ್ದೇನೆ. ಹಾಗಾಗಿ ತಂಡಕ್ಕೆ ನನ್ನ ಮೊದಲ ಆದ್ಯತೆ ಎಂದರು.
ನನಗೆ ಸಿಕ್ಕ ಅವಕಾಶಗಳಲ್ಲಿ ದೊಡ್ಡ ಮೊತ್ತ ಕಲೆ ಹಾಕಲು ಬಯಸುತ್ತೇನೆ. ನನಗೆ ಐದು ಅವಕಾಶಗಳು ಸಿಕ್ಕರೆ ಒಂದೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಕಲೆ ಹಾಕಿ ತಂಡಕ್ಕಾಗಿ ಪಂದ್ಯ ಗೆಲ್ಲಿಸಲು ಬಯಸುತ್ತೇನೆ. ಬ್ಯಾಟಿಂಗ್ ಸ್ಥಿರತೆಯಿಂದ ಮಾತ್ರ ತಂಡಕ್ಕಾಗಿ ಪಂದ್ಯ ಗೆಲ್ಲಿಸಲು ಸಾಧ್ಯವಿಲ್ಲ. ಇದಕ್ಕೂ ಮಿಗಿಲಾಗಿ ತಂಡಕ್ಕಾಗಿ ಅದ್ಭುತ ಆಟ ಆಡಬೇಕಿದೆ ಎಂದು ತಮ್ಮ ಯೋಜನೆಯನ್ನು ವಿವರಿಸಿದರು.
ಅಸ್ಥಿರ ಪ್ರದರ್ಶನ ನೀಡುತ್ತಿದ್ದೇನೆ ಎಂಬ ಆರೋಪಗಳು ಸಮಸ್ಯೆಯಾಗಿ ಪರಿಣಮಿಸಿದೆ ಎಂದು ನಾನು ಭಾವಿಸುತ್ತಿಲ್ಲ. ಆದರೆ ನಾನೊಬ್ಬ ವಿಭಿನ್ನ ರೀತಿಯ ಆಟಗಾರನಾಗಿದ್ದು, ಬೌಲರ್ಗಳ ಮೇಲೆ ಅಧಿಪತ್ಯ ಸಾಧಿಸಲು ಬಯಸುತ್ತೇನೆ. ಹಾಗೊಂದು ವೇಳೆ ಸ್ಥಿರ ಪ್ರದರ್ಶನದ ಮೇಲೆ ಗಮನ ಹರಿಸಿದರೆ ನನ್ನ ಶೈಲಿಯ ಬ್ಯಾಟಿಂಗ್ ಕಳೆದುಕೊಳ್ಳಲಿದ್ದೇನೆ. ಹಾಗಾಗಿ ಸ್ಥಿರತೆಗಾಗಿ ನನ್ನ ಶೈಲಿಯ ಬ್ಯಾಟಿಂಗ್ ಬಿಟ್ಟುಕೊಡಲು ಸಿದ್ಧವಿಲ್ಲ ಎಂದು ತಿಳಿಸಿದರು.
ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಜತೆಗೆ ಕುಳಿತುಕೊಂಡು ಮುಂದಿನ ಹಾದಿಯ ಬಗ್ಗೆ ಚರ್ಚಿಸಲು ಬಯಸುವುದಾಗಿ ತಿಳಿಸಿದರು. ಇದುವರೆಗೆ ಅವಕಾಶ ಲಭಿಸಿಲ್ಲ. ಆದರೆ ಈ ಬಗ್ಗೆ ಮುಕ್ತವಾಗಿ ಚರ್ಚಿಸಲು ಬಯಸುವುದಾಗಿ ತಿಳಿಸಿದರಲ್ಲದೆ, ಆಸ್ಟ್ರೇಲಿಯಾದಲ್ಲಿ ಭಾರತಕ್ಕಾಗಿ ಟಿ 20 ವಿಶ್ವಕಪ್ ಗೆಲ್ಲುವುದು ನನ್ನ ಗುರಿಯಾಗಿದೆ. ಇದಕ್ಕಾಗಿ ತರಬೇತಿ ಪಡೆಯುತ್ತಿದ್ದೇನೆ. ಇದು ನನ್ನ ದೊಡ್ಡ ಕನಸು ಎಂದಿದ್ದಾರೆ.
ಶಿಖರ್ ಧವನ್ ಗಾಯಾಳುವಾದ ಹಿನ್ನಲೆಯಲ್ಲಿ ಸಂಜುಗೆ ಕೊನೆಗೂ ಅವಕಾಶ ಲಭಿಸಿದೆ. ಆದರೂ ಈ ಬಾರಿಯಾದರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವರೇ ಎಂಬುದು ತಿಳಿದು ಬಂದಿಲ್ಲ.
ನಾಲ್ಕು ವರ್ಷಗಳ ಬಳಿಕ ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ಸರಣಿಗೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ ಆಡುವ ಅವಕಾಶದಿಂದ ವಂಚಿತವಾಗಿದ್ದರು. ಇಷ್ಟಾದರೂ ವೆಸ್ಟ್ಇಂಡೀಸ್ ವಿರುದ್ದ ನಡೆಯಲಿರುವ ಟಿ20 ಸರಣಿಗೆ ಆಯ್ಕೆಗೆ ಪರಿಗಣಿಸಿರಲಿಲ್ಲ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. (ಎಂ.ಎನ್)