ಮೈಸೂರು

ಬಡ್ತಿ ಮೀಸಲಾತಿ ಅನೂರ್ಜಿತ : ಮರು ಪರಿಶೀಲನೆಗೆ ಆಗ್ರಹ

ಮೀಸಲಾತಿ ಬಡ್ತಿ ಅನೂರ್ಜಿತಗೊಳಿಸಿ ರಾಷ್ಟ್ರ ಸರ್ವೋಚ್ಛ ನ್ಯಾಯಾಲಯವು ಕಳೆದ ಫೆ.9ರಂದು ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ಮರು ಪರಿಶೀಲನೆಗೊಳಪಡಿಸದೆ ಕಳೆದೊಂದು ತಿಂಗಳಿನಿಂದ ವೃಥಾ ಕಾಲಹರಣ ಮಾಡಿರುವುದನ್ನು ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ವರ್ಗದ ಅಧಿಕಾರಿಗಳ ನೌಕರರ ಪರಿಷತ್ ಮೈಸೂರು ವಿಭಾಗದ ಗೌರವಾಧ‍್ಯಕ್ಷ ಶಾಂತರಾಜು ಸರ್ಕಾರದ ಬೇಜವಾಬ್ದಾರಿ ನಡೆಯನ್ನು ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿ ಹಿಂದುಳಿದ, ಶೋಷಿತರ ಸಮಗ್ರ ಏಳ್ಗೆಗಾಗಿ ಸಾಮಾಜಿಕವಾಗಿ ಸಮಾನತೆ ಬರುವವರೆಗೂ ಮೀಸಲಾತಿಯಿರಬೇಕೆಂದು ಉಲ್ಲೇಖಿಸಿದ ಅವರು ಇಂದಿಗೂ ಪರಿಶಿಷ್ಟರಿಗೆ ಕಾಯ್ದೆಯಲ್ಲಿ ಮೀಸಲಾತಿಯಿದೆ ಹೊರತು ಅನುಷ್ಠಾನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಶೇ.18ರ ಮೀಸಲಾತಿಯಂತೆ ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಿ, ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ವಿಸ್ತರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ತೀರ್ಪು ಮರುಪರಿಶೀಲನೆಗೆ ಆಗ್ರಹಿಸಿ ರಾಜ್ಯಾದ್ಯಂತ ಧರಣಿ, ಮುಷ್ಕರ ಹಾಗೂ ಸಮಾವೇಶಗಳು ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದು ಪರಿಶಿಷ್ಟ ವರ್ಗದ ಯಾವೊಬ್ಬ ಮುಖಂಡರು ಈ ಬಗ್ಗೆ ಪ್ರತಿಕ್ರಿಯಿಸದೆ ಇರುವುದು ಖೇದಕರವೆಂದರು.

ಸರ್ಕಾರ ಮೀಸಲಾತಿ ಬಡ್ತಿ ಹಿಂಪಡೆತಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ನಡೆಸದಿದ್ದಲ್ಲಿ ಪರಿಷತ್‍ನಿಂದ ರಾಜ್ಯಾದ್ಯಂತ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಗೌರವ ಕಾರ್ಯದರ್ಶಿ ಚಿಕ್ಕಂದಾನಿ ಮಾತನಾಡಿ 125 ವರ್ಷ ಪುರಾತನ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ನೌಕರರ ನೇಮಕಾತಿಯಲ್ಲಿ ಪರಿಶಿಷ್ಟರಿಗೆ ಕೇವಲ ಶೇ.2ರಷ್ಟು ಮೀಸಲಾತಿಯನ್ನು ನೀಡಿರುವುದು ದುರಂತ, ಅದೇ ರೀತಿ ಕಾವಾದಲ್ಲಿಯೂ ಕಡೆಗಣಿಸಲಾಗಿದ್ದು ಸಮಾಜಕ್ಕಾಗಿರುವ ಅನ್ಯಾಯಕ್ಕೆ ಇವೆರಡು ಜ್ವಲಂತ ಉದಾಹರಣೆಯೆಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿಗಳ, ನೌಕರರ ಪರಿಷತ್‍ನ ಹಲವಾರು ಸದಸ್ಯರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: