ಪ್ರಮುಖ ಸುದ್ದಿ

ಕರಿಕೆ ಪ್ರತಿಭಟನೆ ರಾಜಕೀಯ ಪ್ರೇರಿತ : ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಟೀಕೆ

ರಾಜ್ಯ( ಮಡಿಕೇರಿ) ನ.29 :- ಕೊಡಗಿನ ಗಡಿಭಾಗವಾದ ಕರಿಕೆಯಲ್ಲಿ ರಸ್ತೆಗಳು ಅಭಿವೃದ್ಧಿಯಾಗಿಲ್ಲವೆಂದು ಆರೋಪಿಸಿ ಡಿ.4 ರಂದು ಕೆಲವರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಭಾಗಮಂಡಲ ಕ್ಷೇತ್ರದ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ರಸ್ತೆ ಹದಗೆಟ್ಟಿದ್ದು, ಇದರ ದುರಸ್ತಿಗೆ ಈಗಾಗಲೇ ಸಂಸದರು ಹಾಗೂ ಶಾಸಕರು ಅನುದಾನ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಜನವರಿ ಅಂತ್ಯದೊಳಗೆ ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮತ್ತು ಮೇ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸಮಸ್ಯೆ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸದೆ ಏಕಾಏಕಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವುದು ರಾಜಕೀಯ ದುರುದ್ದೇಶದಿಂದ ಎಂದು ಕವಿತಾ ಪ್ರಭಾಕರ್ ಟೀಕಿಸಿದರು.
ಸ್ಥಳೀಯ ಗ್ರಾ.ಪಂ. ಪ್ರತಿನಿಧಿಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಶಾಸಕರು ರಸ್ತೆ ದುರಸ್ತಿಗೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಕರಿಕೆ ಮುಖ್ಯ ರಸ್ತೆಗೆ 5.55 ಕೋಟಿ ರೂ.ಗಳ ಕಾಮಗಾರಿ ಪ್ರಸ್ತುತ ಕ್ರಿಯಾ ಯೋಜನೆಯಲ್ಲಿದೆ. ಅಲ್ಲದೆ 2.30 ಕಿ.ಮೀ. ರಸ್ತೆ ಕಾಮಗಾರಿಗೆ 2 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ. ಆದರೆ ಗುತ್ತಿಗೆದಾರರು ಟೆಂಡರ್ ಹಾಕಲು ಮುಂದೆ ಬಾರದಿರುವುದು ಕಾಮಗಾರಿ ವಿಳಂಬವಾಗಲು ಮತ್ತೊಂದು ಕಾರಣವಾಗಿದೆ. ಉಳಿದ ಕಾಮಗಾರಿ ಕೂಡ ಮಂಜೂರಾತಿ ಪಡೆದು ಟೆಂಡರ್ ಹಂತದಲ್ಲಿದೆ. ನಿರಂತರ ಮಳೆ ಇದ್ದ ಕಾರಣ ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳುಗಳಷ್ಟೆ ಆಗಿದೆ. ಈ ಅಲ್ಪಾವಧಿಯಲ್ಲೇ ದೊಡ್ಡಮೊತ್ತದ ಅನುದಾನವನ್ನು ರಸ್ತೆಗಾಗಿ ತರಲಾಗಿದೆ. ಗ್ರಾ.ಪಂ ಮಟ್ಟದಲ್ಲಿ ಈ ಅನುದಾನದ ಬಗ್ಗೆ ಮಾಹಿತಿ ಇದ್ದರೂ ಪ್ರತಿಭಟನೆಯ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದು ಕವಿತಾ ಪ್ರಭಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟು 12.8 ಕಿ.ಮೀ. ದೂರದ ರಸ್ತೆ ಅಭಿವೃದ್ಧಿಗೆ 5.55 ಕೋಟಿ ರೂ. ಮಂಜೂರಾಗಿದೆ. 2019-20ನೇ ಸಾಲಿನಲ್ಲಿ ಸಂಸದರು, ಶಾಸಕರು ಹಾಗೂ ಜಿ. ಪಂ. ಸದಸ್ಯರ ಅನುದಾನದ ಜೊತೆಗೆ ಐಟಿಡಿಪಿ ಅನುದಾನದಲ್ಲಿ ಗ್ರಾಮದ 18 ಒಳರಸ್ತೆಗಳಿಗೆ 3.25 ಕೋಟಿ ರೂ. ಬಿಡುಗಡೆಯಾಗಿ ಕೆಲವು ರಸ್ತೆಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇಷ್ಟೆಲ್ಲಾ ಅನುದಾನ ಕರಿಕೆ ರಸ್ತೆಗಾಗಿ ಮಂಜೂರಾಗಿದ್ದರು ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ನಾಯರ್ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಕವಿತಾಪ್ರಭಾಕರ್ ಟೀಕಿಸಿದರು.
ಡಿ.4 ರಂದು ಕರಿಕೆ ಬಂದ್‍ಗೆ ಕರೆ ನೀಡಿರುವುದು ದುರಾದೃಷ್ಟಕರ ಬೆಳವಣಿಗೆಯಾಗಿದ್ದು, ಪ್ರಜ್ಞಾವಂತ ಜನರು ಬಂದ್ ಕರೆಗೆ ಸ್ಪಂದಿಸಬಾರದು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಕರಿಕೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಹೊಸಮನೆ ಎ. ಹರೀಶ, ಕಾರ್ಯದರ್ಶಿ ಪಿ.ಎ.ವಿಜಯ, ಎಪಿಎಂಸಿ ಸದಸ್ಯ ಕೆ.ಎ.ನಾರಾಯಣ, ಬಿಜೆಪಿ 2ನೇ ವಾರ್ಡ್ ಬೂತ್ ಅಧ್ಯಕ್ಷ ಪಾಂಡಿ ನಂಜುಂಡ ಹಾಗೂ ಕಾರ್ಯದರ್ಶಿ ಪಿ.ಎನ್.ನಾರಾಯಣ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: