ಪ್ರಮುಖ ಸುದ್ದಿ

ಮಾತೃ ಭಾಷೆಯ ಶಿಕ್ಷಣದಿಂದ ಉನ್ನತ ಸ್ಥಾನ ಸಂಪಾದಿಸಿ : ಶಿಕ್ಷಣಾಧಿಕಾರಿ ಪಿ.ಎಸ್.ಮಚ್ಚಾಡೊ ಸಲಹೆ

ರಾಜ್ಯ( ಮಡಿಕೇರಿ) ನ.28 :- ಮಾತೃ ಭಾಷೆಯಿಂದ ಮಾತ್ರ ಜ್ಞಾನ ವೃದ್ಧಿಯಾಗಲು ಸಾಧ್ಯ. ಆದ್ದರಿಂದ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೊ ಅವರು ತಿಳಿಸಿದರು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ದ್ವಿತೀಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾತೃ ಭಾಷೆಯಲ್ಲಿ ಕಲಿತಾಗ ಶಬ್ದ ಸಂಪತ್ತು ಬೆಳೆಯುತ್ತದೆ. ಇದರಿಂದ ಪಾಠವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ಮಾತೃ ಭಾಷೆಯನ್ನು ವೃದ್ಧಿಸಿಕೊಂಡು ಹೋದಲ್ಲಿ ಭಾಷಾ ಸಂಪತ್ತು ಬೆಳೆಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಹಿಂದೆ ಪುಸ್ತಕ ಓದುವುದು ಮತ್ತು ಆಟವಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು, ಮೊಬೈಲ್ ಬಂದ ನಂತರ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಇದರಿಂದ ಭಾಷೆ ವೃದ್ಧಿಯಾಗಲು ಸಾಧ್ಯವೇ ಎಂದು ಪಿ.ಎಸ್.ಮಚ್ಚಾಡೊ ಅವರು ಪ್ರಶ್ನಿಸಿದರು.
‘ಮಾತೃ ಭಾಷೆಯು ‘ಒಡಲು ಮತ್ತು ನುಡಿ’ ಇದ್ದಂತೆ, ಒಡಲು ಮಾತೃ ಹೃದಯವಾದರೆ, ನುಡಿ ಅಕ್ಷರದ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದ್ದರಿಂದ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದು ಉನ್ನತ ಜ್ಞಾನ ಮತ್ತು ಸ್ಥಾನ ಸಂಪಾದನೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕರೆ ನೀಡಿದರು.’
ಗಾಳಿಬೀಡು ನವೋದಯ ವಿದ್ಯಾಲಯದ ಶಿಕ್ಷಕರಾದ ಮಾರುತಿ ದಾಸಣ್ಣವರ್ ಮಾತನಾಡಿ ಮಾತೃ ಭಾಷೆಗೆ ಇತರ ಎಲ್ಲಾ ಭಾಷೆಗಳ ಶಬ್ದಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ. ಆದ್ದರಿಂದ ಮಾತೃ ಭಾಷೆ ಕಲಿಕೆ ಮತ್ತು ಓದುವುದಕ್ಕೆ ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಮತ್ತು ಸಂಸ್ಕøತಿ ಉಳಿಸಿ, ಬೆಳೆಸಬೇಕು ಎಂದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಗೊತ್ತಿಲ್ಲದೆ ಪರಭಾಷೆ ಹೇರಿಕೆಯಾಗುತ್ತಿದೆ. ಇದರಿಂದ ಸ್ಥಳೀಯ ಭಾಷೆಗಳ ಆಸ್ಮಿತೆ ಕಳೆದುಕೊಳ್ಳುವ ಆತಂಕ ಉಂಟಾಗುತ್ತಿದೆ. ಆದ್ದರಿಂದ ಮಾತೃ ಭಾಷೆಯ ಆಸ್ಮಿತೆಯನ್ನು ಉಳಿಸಬೇಕು. ತಂತ್ರಜ್ಞಾನ ಬಳಸಿಕೊಂಡು ಮಾತೃ ಭಾಷೆ ಉಳಿಸಿ, ಬೆಳೆಸಬೇಕು ಎಂದರು.
ಶರಣ ಹಾಗೂ ವಚನ ಚಳವಳಿಯು ಕನ್ನಡ ಭಾಷಾ ಸಾಹಿತ್ಯದ ಕಾಂತ್ರಿಯಾಗಿದೆ. ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರು ಬರೆದಿರುವ ಪುಸ್ತಕಗಳನ್ನು ಓದಬೇಕು. ಸಾಹಿತ್ಯ ಓದುವುದರಿಂದ ವ್ಯಕ್ತಿತ್ವದ ಗಂಭೀರತೆ ಬೆಳೆಯಲಿದೆ ಎಂದರು.
ತಾ.ಪಂ.ಇಒ ಪಿ.ಲಕ್ಷ್ಮಿ ಅವರು ಮಾತನಾಡಿ ಮಾತೃ ಭಾಷೆಯಲ್ಲಿ ಕಲಿಯುವುದರಿಂದ ಪರಿಪೂರ್ಣತೆ ಪಡೆಯಬಹುದು. ಆದ್ದರಿಂದ ನಾಡಿನ ಭಾಷೆಯಾದ ಕನ್ನಡ ಭಾಷೆಯಲ್ಲಿ ಓದಬೇಕು ಎಂದರು.
ವಿದ್ಯಾರ್ಥಿಗಳು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳ ಅಭ್ಯಾಸದಿಂದ ಜ್ಞಾನ ಹೆಚ್ಚುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಸ್ಥಾನ ಪಡೆಯಬಹುದು. ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ ಇರಬೇಕು ಎಂದರು.
ಹನ್ನೊಂದು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಕನ್ನಡ ಮಾಧ್ಯಮದಲ್ಲಿಯೇ ಓದಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಅಧಿಕಾರಿಯಾಗಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಎಸ್.ಚೇತನ್ ಅವರು ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗವಕಾಶ ದೊರೆಯಬೇಕು ಎಂದು ಅವರು ಪ್ರತಿಪಾದಿಸಿದರು.
‘ಖಾಸಗಿ ಶಾಲೆಯಲ್ಲಿ ಪಿಯುಸಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ಓದಿ, ನಂತರ ವೈದ್ಯಕೀಯ, ಎಂಜಿನಿಯರಿಂಗ್ ಪ್ರವೇಶಕ್ಕೆ ಸರ್ಕಾರಿ ಕಾಲೇಜು ಬಯಸುತ್ತಾರೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಎಲ್ಲಿಗೆ ಹೋಗಬೇಕು ಎಂದು ಖಾರವಾಗಿ ನುಡಿದರು.’
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ವತಿಯಿಂದ ಕನ್ನಡ ಭಾಷೆ ಬೆಳವಣಿಗೆ ಸಂಬಂಧಿಸಿದಂತೆ ಸಾಹಿತ್ಯ ಸಂವಾದ, ವಚನಕಾರರ ಸಮ್ಮೇಳನ, ಉದಯೋನ್ಮುಕ ಬರಹಗಾರರ ಸಮ್ಮೇಳನ ಹೀಗೆ ಪ್ರತಿ ತಿಂಗಳು ಒಂದು ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಸಹಮತ ವೇದಿಕೆಯ ಅಧ್ಯಕ್ಷರಾದ ಟಿ.ಪಿ.ರಮೇಶ್, ಕೊಡಗು ಪತ್ರಿಕಾ ಭವನ ಟ್ರಸ್ಟಿ ಬಿ.ಎನ್.ಮನುಶೆಣೈ, ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಂ.ಬಿ.ಗಣೇಶ್, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ತಾಸ್ತ, ಮಾದೇಟಿರ ಬೆಳ್ಯಪ್ಪ, ಕೆ.ಟಿ.ಬೇಬಿಮ್ಯಾಥ್ಯೂ, ಕೋಡಿ ಚಂದ್ರಶೇಖರ್, ಜಯಪ್ರಕಾಶ್, ಲತೀಫ್, ಅಂಬೆಕಲ್ ನವೀನ್ ಇತರರು ಇದ್ದರು.
ಬಳಗದ ನಿರ್ದೇಶಕರಾದ ಲೋಕನಾಥ ಅಮೇಚೂರ್ ಸ್ವಾಗತಿಸಿದರು, ಮುನೀರ್ ಅಹ್ಮದ್ ಮತ್ತು ರೇವತಿ ರಮೇಶ್ ನಿರೂಪಿಸಿದರು, ಲಿಯಾತಕ್ ಅಲಿ ಮತ್ತು ತಂಡದವರು ನಾಡಗೀತೆ ಹಾಡಿದರು. ಪಿ.ಪಿ.ಸುನಿತಾ ವಂದಿಸಿದರು.
ಸಬಾ ಕಾರ್ಯಕ್ರಮಕ್ಕೂ ಮೊದಲು ರಾಷ್ಟ್ರಕವಿ ಕುವೆಂಪು ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಶಿಕ್ಷಕರ ತಂಡದಿಂದ ನಾಟಕ ಸ್ಪರ್ಧೆ, ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಕವಿಗಳು ರಚಿತ ಗೀತಾ ಗಾಯನ ಸ್ಪರ್ಧೆ ನಡೆಯಿತು.
2018-19 ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: