ಮೈಸೂರು

ನಗರದಲ್ಲಿ ಕೇಳಿ ಬರಲಿದೆ ಟ್ರಿಣ್ ಟ್ರಿಣ್ ಸದ್ದು : ಸದ್ಯದಲ್ಲಿಯೇ ದೊರಕಲಿದೆ ಚಾಲನೆ

ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಹದಗೆಡುತ್ತಿರುವ ಪರಿಸರವನ್ನು ಸಂರಕ್ಷಿಸುವ, ನಾನಾ ಕಡೆಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸೂಕ್ತ ವಾಹನ ಸೌಲಭ್ಯವಿಲ್ಲದೆ ಪರದಾಡುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆರಂಭಗೊಂಡ ಮಹತ್ವಾಕಾಂಕ್ಷೆಯ ಟ್ರಿಣ್ ಟ್ರಿಣ್ ಯೋಜನೆಗೆ  ಕೊನೆಗೂ ಮುಹೂರ್ತ ಕೂಡಿಬಂದಿದ್ದು, ಮಾರ್ಚ್ ಎರಡನೇ ಅಥವಾ ಮೂರನೆ ವಾರದಲ್ಲಿ ಮೈಸೂರು ನಗರದಾದ್ಯಂತ ಚಾಲನೆ ಪಡೆದುಕೊಳ್ಳಲಿದೆ. ಜನವರಿ 11ರಂದು ಜಿಲ್ಲಾಧಿಕಾರಿಗಳು  ಆರ್ ಟಿ ಓ ವೃತ್ತದ ಬಳಿ ಸೈಕಲ್ ತುಳಿದು ಪರಿಶೀಲನೆ ನಡೆಸಿದ್ದರು. ಆದರೆ ಇಲ್ಲಿಯವರೆಗೂ ಅದಕ್ಕೆ ಚಾಲನೆ ದೊರಕಿರಲಿಲ್ಲ.

ರಾಜ್ಯ ಸರ್ಕಾರ ಗ್ಲೋಬಲ್ ಎನ್ವಿರಾನ್‍ಮೆಂಟ್ ಫೆಸಿಲಿಟಿ ಗ್ರ್ಯಾಂಟ್ ಹಾಗೂ ಮೈಸೂರು ನಗರಪಾಲಿಕೆ ಸಹಯೋಗದಲ್ಲಿ ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಶೇರಿಂಗ್ ಸಿಸ್ಟಂ ಅನ್ನು 20 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲು ಮುಂದಾಗಿ ಹಲವು ತಿಂಗಳುಗಳೇ ಕಳೆದರೂ, ಅನೇಕ ಕಾರಣಗಳಿಂದ ಜಾರಿಯಾಗಿರಲಿಲ್ಲ. 450 ಸೈಕಲ್‍ಗಳು ರಸ್ತೆಗಿಳಿಯಲಿದ್ದು, ಮೊದಲ ಹಂತದಲ್ಲಿ 200 ಸೈಕಲ್‍ಗಳು ರಸ್ತೆಗಿಳಿಯಲು ಸಿದ್ಧವಾಗಿದ್ದವು. ಜನವರಿಯಲ್ಲಿ ಆರಂಭಗೊಳ್ಳಬೇಕಿದ್ದ ಯೋಜನೆ ಇದೀಗ ಮಾರ್ಚ್‍ನಲ್ಲಿ ಚಾಲನೆ ಪಡೆದುಕೊಳ್ಳಲಿದೆ.

ನಗರದ ಪ್ರಮುಖ ಕಡೆಗಳಲ್ಲಿ ಸೈಕಲ್‍ಸ್ಟ್ಯಾಂಡ್ ನಿರ್ಮಾಣ, ನಿಲ್ದಾಣಕ್ಕೆ ಅಗತ್ಯವಿರುವ ವಿದ್ಯುತ್ ಸಂಪರ್ಕ, ಸ್ಮಾರ್ಟ್‍ಕಾರ್ಡ್ ಸ್ವೈಪ್ ಮಾಡುವ ಯಂತ್ರಗಳ ಅಳವಡಿಕೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಗರದೆಲ್ಲೆಡೆ ಸೈಕಲ್‍ಗಳ ಟ್ರಿಣ್ ಟ್ರಿಣ್ ಸದ್ದು ಕೇಳಿಬರಬೇಕಿತ್ತು. ಆದರೆ ಕೆಲ ತಾಂತ್ರಿಕ ತೊಂದರೆಗಳು, ಸ್ಟ್ಯಾಂಡ್‍ಗಳಲ್ಲಿನ ಸ್ಥಳೀಯ ಸಮಸ್ಯೆ, ಹೆಚ್ಚಿನ ಟಾರಿಪ್ ಇರುವುದರಿಂದ ಸಾರ್ವಜನಿಕರ ನಿರಾಸಕ್ತಿಯಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿದ್ದು ಈ ತಿಂಗಳ ಅಂತ್ಯದ ವೇಳೆಗೆ ಟ್ರಿಣ್ ಟ್ರಿಣ್ ಸೈಕಲ್‍ಗಳು ರಸ್ತೆಗಿಳಿಯಲಿದೆ.

ಸೈಕಲ್ ಲಭ್ಯತೆ ಹೇಗೆ..?

ಸೂಕ್ತ ವಾಹನ ಸೌಲಭ್ಯವಿಲ್ಲದೆ ಪರದಾಡುವ ಸಾರ್ವಜನಿಕರು ನಗರದ ವಿವಿಧ ಕಡೆಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ 450 ಟ್ರಿಣ್ ಟ್ರಿಣ್ ಸೈಕಲ್‍ಗಳು ಸಾರ್ವಜನಿಕರು ಹಾಗೂ ಪ್ರವಾಸಿಗರ ಬಳಕೆಗೆ ಲಭ್ಯವಿದ್ದು, ಸೈಕಲ್‍ನಲ್ಲಿ ಓಡಾಡ ಬಯಸುವವರು ನಗರದಲ್ಲಿರುವ ಯಾವುದಾದರೊಂದು ನೋಂದಣಿ ಕೇಂದ್ರದಲ್ಲಿ ತಮ್ಮ ಗುರುತಿನ ಚೀಟಿ, ವಿಳಾಸದ ಚೀಟಿಯನ್ನು ಪ್ರದರ್ಶಿಸಿದರೆ ಅವರಿಗೆ ಸ್ಮಾರ್ಟ್‍ಕಾರ್ಡ್ ನೀಡಲಾಗುತ್ತದೆ. ಈ ಸ್ಮಾರ್ಟ್‍ಕಾರ್ಡ್‍ನ್ನು ಸ್ವೈಪಿಂಗ್ ಮಷಿನ್‍ನಲ್ಲಿ ಸ್ವೈಪ್ ಮಾಡಿದರೆ ಒಂದು ಸೈಕಲ್ ಪಡೆಯಬಹುದು. ಸಾರ್ವಜನಿಕರು ಸೈಕಲ್ ಪಡೆಯಲು ಮೊದಲ ಒಂದು ಗಂಟೆಗೆ 15 ರೂ., ನಂತರದ ಪ್ರತಿ ಅರ್ಧ ಗಂಟೆಗೆ 10 ರೂ. ನಂತೆ ಹಣ ಪಾವತಿಸಬೇಕಾಗಿದೆ.

ಎಲ್ಲೆಲ್ಲಿ ನೋಂದಣಿ ..?

ಸರ್ಕಾರ ಹಾಗೂ ಪಾಲಿಕೆಯ ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್  ಶೇರಿಂಗ್ ಸಿಸ್ಟ್ಂ ಗಾಗಿ ನಗರದ ಪ್ರಮುಖ ಕಡೆಗಳಲ್ಲಿ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅದರಂತೆ ಅರಮನೆ, ರೈಲ್ವೇ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ನಗರ ಪಾಲಿಕೆ ಕಚೇರಿ, ಜಯನಗರದ ಪಾಲಿಕೆ ವಲಯ ಕಚೇರಿ ಹಾಗೂ ಮೃಗಾಲಯದ ಸಮೀಪ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ. ಹೀಗಾಗಿ ಸೈಕಲ್ ಪಡೆಯುವವರು ಈ ಯಾವುದಾದರೂ ಒಂದು ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಸೈಕಲ್ ಪಡೆಯಬಹುದಾಗಿದೆ. ಈ ಎಲ್ಲಾ ಕೇಂದ್ರಗಳಿಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ನಗರದ 22 ಸ್ಥಳಗಳಲ್ಲಿ ಸೈಕಲ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಅದರಂತೆ ಅರಮನೆ, ಸಂತ ಫಿಲೋಮಿನಾ ಚರ್ಚ್, ಮೃಗಾಲಯ, ಮಾಲ್ ಆಫ್ ಮೈಸೂರು, ರೈಲ್ವೆ ನಿಲ್ದಾಣ, ಕಾರಂಜಿಕೆರೆ, ದೇವರಾಜ ಅರಸು ರಸ್ತೆ, ಕಲಾಮಂದಿರ, ನ್ಯಾಯಾಲಯದ ಸಮೀಪ, ಕುಕ್ಕರಹಳ್ಳಿ ಕೆರೆ, ಜಗನ್ಮೋಹನ ಅರಮನೆ, ನಗರ ಬಸ್‍ನಿಲ್ದಾಣ, ಒಂಟಿಕೊಪ್ಪಲ್, ಆಕಾಶವಾಣಿ, ಸಂತ ಜೋಸೆಫ್ ಶಾಲೆ, ಚಾಮುಂಡಿಬೆಟ್ಟದ ತಪ್ಪಲು, ಚಾಮುಂಡಿಬೆಟ್ಟ, ಜಯನಗರ, ಹಾರ್ಡಿಂಜ್ ವೃತ್ತ, ಸರ್ಕಾರಿ ಆಯುರ್ವೇದ ವೃತ್ತ, ಖಾಸಗಿ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ರಾಮಸ್ವಾಮಿ ವೃತ್ತ, ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ಬಳಿ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ನೋಂದಣಿ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದವರು ಈ ಯಾವುದೇ ನಿಲ್ದಾಣದಲ್ಲಾದರೂ ಸೈಕಲ್ ಪಡೆಯಬಹುದು.

ಈ ಕುರಿತು ಸಿಟಿಟುಡೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರನ್ನು ಮಾತನಾಡಿಸಿದಾಗ ಪ್ರತಿಕ್ರಿಯಿಸಿದ ಅವರು, ವಾಹನದಟ್ಟಣೆ ಕಡಿಮೆ ಮಾಡಿ ಪರಿಸರವನ್ನು ಕಾಪಾಡುವ ಉದ್ದೇಶದಿಂದ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಟ್ರಿಣ್ ಟ್ರಿಣ್ ಯೋಜನೆ ಆರಂಭಿಸಲಾಯಿತು. ಆದರೆ, ಕೆಲ ಸ್ಥಳೀಯ ಸಮಸ್ಯೆಗಳಿಂದ ಯೋಜನೆ ಕುಂಠಿತವಾಗುತ್ತಿದೆ. ಒಂದೆರಡು ಕಡೆ ಜಾಗದ ಸಮಸ್ಯೆ ಇದೆ. ಜತೆಗೆ ಟಾರಿಪ್ ಪ್ಲಾನ್ ಹೆಚ್ಚಿದೆ ಎಂದು ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ. ಕೆಲ ತಾಂತ್ರಿಕ ಸಮಸ್ಯೆ ಇದ್ದು ಪರಿಶೀಲನೆ ನಡೆಸಲಾಗುತ್ತಿದೆ. ನೂರರಷ್ಟು ಫಲಿತಾಂಶ ಬಂದ ಬಳಿಕ ಮಾರ್ಚ್ ಎರಡನೇ ಅಥವಾ ಮೂರನೇ ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.

ಒಟ್ಟಿನಲ್ಲಿ ಸದ್ಯದಲ್ಲಿಯೇ ಮೈಸೂರು ನಗರದಾದ್ಯಂತ ಟ್ರಿಣ್ ಟ್ರಿಣ್ ಸದ್ದು ಕೇಳಿ ಬರಲಿದೆ.

ಬಿ.ಎಂ.

Leave a Reply

comments

Related Articles

error: