ಮೈಸೂರು

ಸಿಂಧು ನದಿ ಒಪ್ಪಂದದಂತೆ ಕಾವೇರಿ ಜಲಹಂಚಿಕೆ ಒಪ್ಪಂದವನ್ನೂ ರದ್ದುಪಡಿಸಲು ಒತ್ತಾಯ

ಕಾವೇರಿ ನಿರ್ವಹಣಾ ಸಮಿತಿ ರಚನೆ ಮಾಡಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಆದೇಶ ವಿರೋಧಿಸಿ ಭಾನುವಾರ ಮೈಸೂರಿನಲ್ಲಿ ಕಾವ್ಯ ವಾಚನ ಮಾಡಿ ವಿನೂತನವಾಗಿ “ಕಾವೇರಿಗಾಗಿ ಕಾವ್ಯ ಚಳವಳಿ” ನಡೆಸಲಾಯಿತು.

ಮೈಸೂರಿನ ಗನ್‌ಹೌಸ್ ಎದುರು ಇರುವ ಕುವೆಂಪು ಉದ್ಯಾನವನದಲ್ಲಿ ನಾಗನವ ಕಲಾ ಸಾಹಿತ್ಯ ವೇದಿಕೆ ಮತ್ತು ಮೈಸೂರು ಕನ್ನಡ ವೇದಿಕೆ ಆಶ್ರಯದಲ್ಲಿ ಸಮಾವೇಶಗೊಂಡ ಕವಿಗಳು, ಕಾವೇರಿ ನಿರ್ವಹಣಾ ಸಮಿತಿ ರಚನೆ ವಿರೋಧಿಸಿ ಕಾವ್ಯಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿ ‘ಕಾವೇರಿ ನಮ್ಮದು’ ಎಂದು ಹಕ್ಕು ಪ್ರತಿಪಾದಿಸಿದರು.

‘ಕಾವೇರಿ ನಮ್ಮದು – ನಮ್ಮದು’ ಘೋಷಣೆಯ ನಡುವೆ ಕವಿಗಳು ಕಾವೇರಿ ಕುರಿತ ಕವನಗಳನ್ನು ಓದಿದರು. ಈ ವೇಳೆ ಮಾತನಾಡಿದ ನಾಗನವ ಕಲಾ ಸಾಹಿತ್ಯ ವೇದಿಕೆ ಅಧ್ಯಕ್ಷ ಹೊಮ್ಮ ಮಂಜುನಾಥ್, ಅಗತ್ಯವಿಲ್ಲದಿದ್ದರೂ ಕಾವೇರಿ ನೀರಿಗಾಗಿ ಹಠಮಾರಿ ಧೋರಣೆ ತಾಳಿದ ಜಯಲಲಿತಾ ವಿರುದ್ಧ ಕಿಡಿಕಾರಿದರು.

ಸುಪ್ರಿಂಕೋರ್ಟ್ ಏಕಪಕ್ಷೀಯವಾಗಿ ಕಾವೇರಿ ನಿರ್ವಹಣಾ ಸಮಿತಿ ರಚನೆಗೆ ಆದೇಶ ನೀಡಿರುವುದು ಖಂಡನೀಯ. ಇದರಿಂದ ಕಾವೇರಿ ಮೇಲಿನ ಕನ್ನಡಿಗರ ಹಕ್ಕು ಕಳೆದುಕೊಂಡಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನೆರೆರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತ ಸಿಂಧೂ ನದಿ ಒಪ್ಪಂದ ರದ್ದು ಮಾಡಲು ಚಿಂತನೆ ನಡೆಸಿದೆ. ಅದೇ ರೀತಿ ಇದೀಗ ರಾಜ್ಯವೂ ಸಹ ದಶಕಗಳ ಹಿಂದೆ ತಮಿಳುನಾಡಿನೊಂದಿಗೆ ಮಾಡಿಕೊಂಡಿರುವ ಕಾವೇರಿ ಒಪ್ಪಂದವನ್ನು ರದ್ದು ಮಾಡಿ, ಪ್ರಸ್ತುತ ಮಳೆ ಪ್ರಮಾಣಕ್ಕನುಗುಣವಾಗಿ ಹೊಸ ಒಪ್ಪಂದ ಏರ್ಪಡಿಸುವ ಕುರಿತು ಚಿಂತನೆ ನಡೆಸುವಂತೆ ಆಗ್ರಹಿಸಿದರು.

ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ಕಾವೇರಿ ನಮ್ಮದು, ಕಾವೇರಿ ಉಳಿವಿಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಾವೇರಿ ಮೇಲಿನ ನಮ್ಮ ಹಕ್ಕನ್ನು ಕಾವ್ಯದ ಮೂಲಕ ಪ್ರತಿಪಾದಿಸಲಾಗುತ್ತಿದೆ ಎಂದು ಹೇಳಿದರು.

ಕಾವ್ಯ ಚಳವಳಿಯಲ್ಲಿ ಸಾಹಿತಿ ಬನ್ನೂರು ಕೆ.ರಾಜು; ವೇದಿಕೆಯ ನಾಲಾಬೀದಿ ರವಿ; ಎಸ್.ನಾಗರತ್ನ; ಸೌಗಂಧಿಕಾ ಜೋಯಿಸ್, ಎ.ಸಂಗಪ್ಪ, ರಾಧಾಕೃಷ್ಣ, ಕಲಾವಿದೆ ಸುಮಾರಾಜ್‌ಕುಮಾರ್, ಮನೋಹರ್, ವಕೀಲ ಆರ್.ಡಿ.ಕುಮಾರ್, ಕೆ.ವಿ.ವಾಸು, ಕೆರೋಡಿ, ಎಂ.ಲೋಲಾಕ್ಷಿ, ದಿವ್ಯಾ ವಿನಯ್, ಮುತ್ತುಸ್ವಾಮಿ, ನಾರಾಯಣರಾವ್, ಅರವಿಂದ ಶರ್ಮಾ, ಮಣಿಕಂಠೇಶ್ವರಿ, ಬೋಗಾದಿ ಸಿzಗೌಡ, ಮೆಡಿಕಲ್ ಮಹೇಶ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. 30 ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.

Leave a Reply

comments

Tags

Related Articles

error: