ಪ್ರಮುಖ ಸುದ್ದಿ

ವಿಶ್ವ ಬುಡಕಟ್ಟು ದಿನಾಚಾರಣೆ : ಶಾಲಾ ಕಾಲೇಜುಗಳಲ್ಲಿ ಜಾನಪದ ವಿಷಯ ಅಳವಡಿಸಬೇಕು : ಡಾ.ಎಸ್.ಬಾಲಾಜಿ ಸಲಹೆ

ರಾಜ್ಯ( ಮಡಿಕೇರಿ)ಡಿ.1:- ಜಾನಪದ ಸಾಹಿತ್ಯವೆನ್ನುವುದು ಜೀವನದ ಹಲವು ಮಜಲುಗಳಲ್ಲಿ ಬಿಂಬಿತವಾದ ವಿಷಯಗಳನ್ನು ಆಧರಿಸಿ ರೂಪುಗೊಂಡ ಅಂಶವಾಗಿದ್ದು, ಶಾಲಾ ಕಾಲೇಜುಗಳಲ್ಲಿ ಜಾನಪದ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಸೇರ್ಪಡೆಗೊಳಿಸಬೇಕೆಂದು ಬೆಂಗಳೂರು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ತಿಳಿಸಿದ್ದಾರೆ.
ವಿರಾಜಪೇಟೆ ಸರ್ಕಾರಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಕನ್ನಡ ಜಾನಪದ ಪರಿಷತ್, ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಬುಡಕಟ್ಟು ದಿನಾಚಾರಣೆ ಮತ್ತು ವಿಶ್ವಜಾನಪದ ದಿನಾಚಾರಣೆ- 2019’ಯನ್ನು ಒರಳಿಗೆ ಭತ್ತವನ್ನು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ಸಂಸ್ಕೃತಿಯನ್ನು ಮುಂದಿನ ಪಿಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು, ಸರ್ಕಾರವು ಜಾನಪದ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ನೀಡುವ ಮಾಸಾಶನವನ್ನು ಪರಿಷ್ಕರಿಸಿ ಹೆಚ್ಚು ಮಾಡಬೇಕೆಂದರು.
ಕನ್ನಡ ಜಾನಪದ ಪರಿಷತ್ ಕೊಡಗು ಜಿಲ್ಲೆ ಅಧ್ಯಕ್ಷರಾದ ಡಾ.ಕಾವೇರಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಎಂಬುದು ಮನೆಮನೆಗಳಿಂದ ಉದ್ಭವವಾದ ಜೀವಂತ ಸಾಹಿತ್ಯವಾಗಿದ್ದು, ಇಂತಹ ಜಾನಪದ ಸಾಹಿತ್ಯ, ಪದ್ಧತಿಗಳು ಕೊಡಗಿನಲ್ಲಿ ಜೀವಂತವಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೀರಾಜಪೇಟೆಯ ವನಜಾಕ್ಷಿ, ಇಂದಿನ ಯುವ ಪೀಳಿಗೆಯಲ್ಲಿ ಮೌಲ್ಯಯುತವಾದ ಸಂಸ್ಕೃತಿ ಕಾಣೆಯಾಗಿದೆ. ಗ್ರಾಮ ಭಾಗಗಳಿಂದ ಸಾಗಿ ನಗರ ವ್ಯಾಪ್ತಿಯವರೆಗೆ ಪಸರಿಸಿರುವ ಮೊಬೈಲ್ ಸಂಸ್ಕೃತಿಯು ಜಾನಪದ ಸಾಹಿತ್ಯದ ಮೇಲೆ ಆಕ್ರಮಣ ಮಾಡುತ್ತಾ ಸಾಗಿದೆಯೆಂದು ಕಳವಳ ವ್ಯಕ್ತಪಡಿಸಿ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿರಿಸಿ ಎಂದು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಎನ್.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯ ಮತ್ತು ಕಲೆಯು ಜೀವನದ ಅವಿಭಾಜ್ಯ ಅಂಗ. ಗ್ರಾಮೀಣ ಸೊಗಡು ಇಂದು ಅಳಿವಿನಂಚಿನಲ್ಲಿದ್ದರು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹೆಚ್ಚು ಉಪಯೋಗವಾಗುತ್ತದೆಂದರು.
ಸನ್ಮಾನ- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷರಾದ ಟಿ.ಪಿ ರಮೇಶ್, ಕಾನೂರು ಜಾನಪದ ಕಲಾವಿದರಾದ ಸುಳ್ಳಿಮಾಡ ಗೌರಿ ನಂಜಪ್ಪ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾದ ಕುಡಿಯರ ಮುತ್ತಪ್ಪ ಮತ್ತು ಕನ್ನಡ ಜಾನಪದ ಪರಿಷತ್ ಬೆಂಗಳೂರು ಅಧ್ಯಕ್ಷರಾದ ಡಾ. ಎಸ್.ಬಾಲಾಜಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಕ್ಯಾತನಹಳ್ಳಿ ಪ್ರಕಾಶ್ ಹೆಚ್., ಕನ್ನಡ ಜಾನಪದ ಪರಿಷತ್‍ನ ಡಾ.ಕನಕತಾರ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ಬೊವ್ವೆರೀಯಂಡ ಆಶಾ ಸುಬ್ಬಯ್ಯ ಮೊದಲಾದವರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: