
ದೇಶ
ಪತ್ನಿ, ಅತ್ತಿಗೆಯನ್ನು ಗುಂಡಿಕ್ಕಿ ಕೊಂದು ತಾನೂ ಗುಂಡು ಹಾರಿಸಿಕೊಂಡ ಸೈನಿಕ
ಪಾಟ್ನಾ,ಡಿ.2-ಸೈನಿಕನೊಬ್ಬ ಪತ್ನಿ ಮತ್ತು ಅತ್ತಿಗೆಯನ್ನು ಗುಂಡಿಕ್ಕಿ ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸಯೀದಾಬಾದ್ನಲ್ಲಿ ನಡೆದಿದೆ.
ಗುಜರಾತ್ ನಲ್ಲಿ ಕರ್ತವ್ಯದಲ್ಲಿದ್ದ ಸೈನಿಕ ವಿಷ್ಣುಕುಮಾರ್ ಶರ್ಮಾ (33) ಪತ್ನಿ ದಮನಿ ಶರ್ಮಾ, ಅತ್ತಿಗೆ ಡಿಂಪಲ್ ಶರ್ಮಾರನ್ನು ಗುಂಡಿಕ್ಕಿ ಸಾಯಿಸಿದ್ದಾರೆ.
ಘಟನೆಯಲ್ಲಿ ಮುಂದಿನ ಸೀಟ್ನಲ್ಲಿ ಅಜ್ಜನ ಜತೆ ಕುಳಿತಿದ್ದ ವಿಷ್ಣುವಿನ ಇಬ್ಬರು ಮಕ್ಕಳು ಸುರಕ್ಷಿತವಾಗಿದ್ದಾರೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕೆಗೆ ಕಳುಹಿಸಿದ್ದಾರೆ. ವಿಷ್ಣುವಿನ ಗುರುತುಪತ್ರ, ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಮತ್ತು ಕಾರು ವಶಪಡಿಸಿಕೊಳಲಾಗಿದೆ.
ಚಲಿಸುತ್ತಿದ್ದ ಕಾರಿನಲ್ಲಿ ತನ್ನ ಇಬ್ಬರು ಮಕ್ಕಳ ಎದುರಲ್ಲೇ ಪತ್ನಿ ಹಾಗೂ ಅತ್ತಿಗೆಯನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಎರಡು ತಿಂಗಳಿನಿಂದ ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ವಿಷ್ಣಕುಮಾರ್ ರಜೆ ಮೇಲೆ ಬಂದಿದ್ದರು. ಅನಾರೋಗ್ಯ ಕಾರಣದಿಂದ ಈತನ ನಡವಳಿಕೆಯೂ ಇತ್ತೀಚೆಗೆ ಸಹಜವಾಗಿರಲಿಲ್ಲ. ಅರಾ ಎಂಬ ಗ್ರಾಮದಲ್ಲಿ ಚಿಕಿತ್ಸೆಗಾಗಿ ಬಂದವರು ಪಾಟ್ನಾಗೆ ತೆರಳುತ್ತಿದ್ದರು ಈ ವೇಳೆ ಘಟನೆ ಸಂಭವಿಸಿದೆ ಎಂದು ಪಾಲಿಗಂಜ್ ಡಿಎಸ್ಪಿ ಮನೋಜ್ ಕುಮಾರ್ ಪಾಂಡೆ ಹೇಳಿದ್ದಾರೆ.
ತಂದೆ ಮೊದಲು ದೊಡ್ಡಮ್ಮನಿಗೆ, ಬಳಿಕ ತಾಯಿಗೆ ಗುಂಡು ಹೊಡೆದು ಬಳಿಕ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ತಕ್ಷಣ ಅಜ್ಜ ಕಾರಿನಿಂದ ಕೆಳಗಿಳಿದು ಸ್ಥಳೀಯರ ಸಹಾಯ ಕೋರಿದರು ಎಂದು ಕಾರಿನಲ್ಲಿದ್ದ ಏಳು ವರ್ಷದ ಮಗ ಘಟನೆಯ ವಿವರ ನೀಡಿದ್ದಾನೆ. ಗುಂಡು ಹಾರಿಸುವ ಮುನ್ನ ವಿಷ್ಣು ಹಾಗೂ ಪತ್ನಿಗೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. (ಎಂ.ಎನ್)