ಕ್ರೀಡೆ

ಐಸಿಸಿ ಅಂಡರ್ 19 ವಿಶ್ವಕಪ್‌: ಭಾರತ ತಂಡ ಪ್ರಕಟ

ನವದೆಹಲಿ,ಡಿ.2-ಐಸಿಸಿ ಅಂಡರ್ 19 ವಿಶ್ವಕಪ್‌ಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪ್ರಕಟಿಸಿದೆ.

ಅಖಿಲ ಭಾರತ ಕಿರಿಯರ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆಗೊಳಿಸಿದೆ. ಉತ್ತರ ಪ್ರದೇಶದ ಬ್ಯಾಟ್ಸ್‌ಮನ್ ಪ್ರಿಯಂ ಗಾರ್ಗ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 19 ವರ್ಷದ ಗಾರ್ಗ್ ಎಡಗೈ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದು, ಪ್ರಥಮ ದರ್ಜೆಯಲ್ಲಿ ದ್ವಿಶತಕ ಹಾಗೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಸಾಧನೆ ಮಾಡಿದ್ದಾರೆ. ದಿಯೋಧರ್ ಟ್ರೋಫಿಯಲ್ಲಿ ಭಾರತ ಸಿ ತಂಡದ ಪರ ಆಡಿದ್ದರು.

ಐಸಿಸಿ ಕಿರಿಯರ ವಿಶ್ವಕಪ್ ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವೆನಿಸಿದೆ. ಅಲ್ಲದೆ, ಇದುವರೆಗೆ ನಾಲ್ಕು ಬಾರಿ ಕಿರೀಟ ಗೆದ್ದಿದೆ. 2018ನೇ ಸಾಲಿನಲ್ಲಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮಣಿಸಿ ಪ್ರಶಸ್ತಿ ಗೆದ್ದಿತ್ತು.

ಕಿರಿಯರ ವಿಶ್ವಕಪ್ 13ನೇ ಆವೃತ್ತಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದೆ. ಅಲ್ಲದೆ ತಲಾ ನಾಲ್ಕು ತಂಡಗಳ ನಾಲ್ಕು ಗುಂಪುಗಳನ್ನು ಹೊಂದಿರಲಿದೆ. ಭಾರತ ತಂಡವು ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಜಪಾನ್ ಜತೆಗೆ ಎ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಪ್ರತಿ ಗುಂಪಿನ ಎರಡು ತಂಡಗಳು ಸೂಪರ್ ಲೀಗ್ ಹಂತವನ್ನು ಪ್ರವೇಶಿಸಲಿದೆ. ಈ ಪೈಕಿ ಜಪಾನ್ ಇದೇ ಮೊದಲ ಬಾರಿಗೆ ಅರ್ಹತೆಯನ್ನು ಪಡೆದಿದೆ.

ವಿಶ್ವಕಪ್‌ಗೂ ಮೊದಲೇ ದಕ್ಷಿಣ ಆಫ್ರಿಕಾ ಪ್ರಯಾಣ ಬೆಳೆಸಲಿರುವ ಟೀಂ ಇಂಡಿಯಾ ಹರಿಣಗಳ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಭಾಗವವಹಿಸಲಿದೆ. ತದಾ ಬಳಿಕ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನ್ಯೂಜಿಲೆಂಡ್ ಸೇರಿದಂತೆ ನಾಲ್ಕು ತಂಡಗಳ ಚತುಷ್ಕೋಣ ಸರಣಿಯಲ್ಲೂ ಆಡಲಿದೆ.

ಭಾರತ ಕಿರಿಯರ ತಂಡ ಇಂತಿದೆ: ಪ್ರಿಯಂ ಗಾರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಾಕ್ ವರ್ಮಾ, ದಿವ್ಯಾಂಶ್ ಸಕ್ಸೆನಾ, ಶುಭಾಂಗ್ ಹೆಗ್ಡೆ, ರವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾದರ್ ಪಾಟೀಲ್. (ಎಂ.ಎನ್)

Leave a Reply

comments

Related Articles

error: