ಕ್ರೀಡೆ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಸತತ 2ನೇ ಬಾರಿ ಕರ್ನಾಟಕ ತಂಡ ಚಾಂಪಿಯನ್

ಸೂರತ್‌,ಡಿ.2-ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್ ನಲ್ಲಿ ತಮಿಳುನಾಡು ತಂಡದ ವಿರುದ್ಧ ಕರ್ನಾಟಕ ತಂಡ 1 ರನ್‌ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಆಗಿದೆ. ಆ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟಗಳಿಸಿದೆ.

ಇಲ್ಲಿನ ಲಾಲಾಭಾಯ್‌ ಕಂಟ್ರ್ಯಾಕ್ಟರ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 180 ರನ್ ಪೇರಿಸಿತು. 181 ರನ್ ಗಳ  ಗುರಿ ಬೆನ್ನತ್ತಿದ ತಮಿಳುನಾಡು ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 179 ರನ್‌ಗಳಿಸಲಷ್ಟೇ ಶಕ್ತವಾಯಿತು.

ತಮಿಳುನಾಡು ತಂಡ ಸತತ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತಾದರೂ ಬಾಬಾ ಅಪರಾಜಿತ್‌ (40) ಮತ್ತು ವಿಜಯ್‌ ಶಂಕರ್‌ (44) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಗೆಲುವಿನ ದಡದತ್ತ ಮುನ್ನುಗ್ಗಿತ್ತು. ಆದರೆ, ಕೊನೆಯ ಓವರ್‌ಗಳಲ್ಲಿ ಒತ್ತಡ ಮೆಟ್ಟಿನಿಂತ ಕರ್ನಾಟಕ ತಂಡ ಅದ್ಭುತ ಕ್ಷೇತ್ರ ರಕ್ಷಣೆ ಮತ್ತು ಬೌಲಿಂಗ್‌ ಮೂಲಕ ಎದುರಾಳಿಯನ್ನು 179 ರನ್‌ಗಳಿಗೆ ನಿಯಂತ್ರಿಸಿ 1 ರನ್‌ಗಳ ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಸತತ 2 ಬಾರಿ ಪ್ರಶಸ್ತಿ ಗೆದ್ದ ಮೊತ್ತ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕಳೆದ ಬಾರಿಯ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಇದೀಗ 2 ಟ್ರೋಫಿಗಳೊಂದಿಗೆ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದಿರುವ ಬರೋಡಾ (2) ಮತ್ತು ಗುಜರಾತ್‌ (2) ತಂಡಗಳು ದಾಖಲೆಯನ್ನು ಸರಿಗಟ್ಟಿದೆ.

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕದ ಪರ ನಾಯಕ ಮನೀಶ್‌ ಪಾಂಡೆ 45 ಎಸೆತಗಳಲ್ಲಿ 4 ಫೋರ್‌ ಮತ್ತು 2 ಸಿಕ್ಸರ್‌ ಒಳಗೊಂಡ ಅಜೇಯ 60 ರನ್‌ ಗಳಿಸಿ ತಂಡಕ್ಕೆ ಸವಾಲಿನ ಮೊತ್ತ ತಂದುಕೊಟ್ಟರು. ಅಗ್ರ ಕ್ರಮಾಂಕದಲ್ಲಿ ಕೆ.ಎಲ್‌.ರಾಹುಲ್‌ (22), ದೇವದತ್‌ ಪಡಿಕ್ಕಲ್‌ (32), ರೋಹನ್‌ ಕದಮ್‌ (35) ರನ್ ಗಳಿಸಿ ಅದ್ಭುತವಾಟವಾಡಿದರು.

ಈ ಮೂಲಕ ಪ್ರಸಕ್ತ ಸಾಲಿನಲ್ಲಿ ವಿಜಯ್ ಹಝಾರೆ ಟ್ರೋಫಿ ಮತ್ತು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಎರಡನ್ನೂ ಗೆದ್ದ ಸಾಧನೆ ಮಾಡಿದ್ದು, ಮುಂಬರುವ ರಣಜಿ ಟ್ರೋಫಿಯಲ್ಲೂ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದೆ. ಇನ್ನು ಕಳೆದ ತಿಂಗಳಷ್ಟೇ ನಡೆದ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಫೈನಲ್‌ನಲ್ಲೂ ಕರ್ನಾಟತ ತಂಡ ತಮಿಳುನಾಡು ವಿರುದ್ಧ ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ಸ್ಕೋರ್ ವಿವರ: ಕರ್ನಾಟಕ: 20 ಓವರ್ಗಳಲ್ಲಿ 5 ವಿಕೆಟ್ಗೆ 180 (ಕೆ.ಎಲ್‌.ರಾಹುಲ್‌ 22, ದೇವದತ್‌ ಪಡಿಕ್ಕಲ್‌ 32, ಮನೀಶ್‌ ಪಾಂಡೆ ಔಟಾಗದೆ 60, ರೋಹನ್‌ ಕದಮ್‌ 35, ಕರುಣ್‌ ನಾಯರ್‌ 17; ಆರ್.ಅಶ್ವಿನ್‌ 34ಕ್ಕೆ 2, ಮುರುಗನ್‌ ಅಶ್ವಿನ್‌ 33ಕ್ಕೆ 2, ವಾಷಿಂಗ್ಟನ್‌ ಸುಂದರ್‌ 28ಕ್ಕೆ 1).

ತಮಿಳುನಾಡು: 20 ಓವರ್ಗಳಲ್ಲಿ 6 ವಿಕೆಟ್ಗೆ 179 (ವಾಷಿಂಗ್ಟನ್‌ ಸುಂದರ್‌ 24, ದಿನೇಶ್‌ ಕಾರ್ತಿಕ್‌ 20, ಬಾಬಾ ಅಪರಾಜಿತ್‌ 40, ವಿಜಯ್‌ ಶಂಕರ್‌ 44; ರೋನಿತ್‌ ಮೋರೆ 32ಕ್ಕೆ 2, ಶ್ರೇಯಸ್‌ ಗೋಪಾಲ್‌ 37ಕ್ಕೆ 1, ಜೆ ಸುಚಿತ್‌ 38ಕ್ಕೆ 1). (ಎಂ.ಎನ್)

Leave a Reply

comments

Related Articles

error: