ಕರ್ನಾಟಕಪ್ರಮುಖ ಸುದ್ದಿ

ಶಾಲೆಯಲ್ಲಿನ ಬಾವಿ ನೀರು ಕುಡಿದು 8 ವಿದ್ಯಾರ್ಥಿಗಳು ಅಸ್ವಸ್ಥ

ಬೆಳ್ತಂಗಡಿ,ಡಿ.2-ಶಾಲೆಯಲ್ಲಿನ ಬಾವಿ ನೀರು ಕುಡಿದು ಎಂಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಶಿಬಾಜೆ ಪೆರ್ಲದ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ನಡೆದಿದೆ.

7ನೇ ತರಗತಿ ವಿದ್ಯಾರ್ಥಿ ಚೇತನ್ ಕುಮಾರ್(13), 8ನೇ ತರಗತಿ ವಿದ್ಯಾರ್ಥಿಗಳಾದ ಸುದೀಶ್(14), ಯೋಗೀಶ್ (14), ರಾಧಾಕೃಷ್ಣ(14), 6ನೇ ತರಗತಿಗಳಾದ ವಿದ್ಯಾರ್ಥಿ ಸುದೀಪ್(12), ರಾಜೇಶ್ (12), ಮೋನಿಸ್( 12) ಹಾಗೂ ಶ್ರವಣ್(12) ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳು. ಇವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಶಾಲಾ ಮಕ್ಕಳು ಶಾಲಾ ತರಕಾರಿ ತೋಟಕ್ಕೆ ಬಾವಿಯಿಂದ ಪಂಪ್ ನಲ್ಲಿ ನೀರು ಹಾಕುತ್ತಿದ್ದರು. ಸಮಯ ಎಂಟು ವಿದ್ಯಾರ್ಥಿಗಳು ಅದೇ ನೀರನ್ನು ಕುಡಿದಿದ್ದರೆನ್ನಲಾಗಿದೆ. ನೀರು ಕುಡಿಯುತ್ತಲೇ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವಿಷಯ ತಿಳಿದು ಶಾಲಾ ಮುಖ್ಯ ಶಿಕ್ಷಕಿ ಶಾರದಾ ಪರಿಶೀಲನೆ ಮಾಡಿದಾಗ ಬಾವಿ ಸಮೀಪ ಕ್ಯಾನ್ ಒಂದು ಕಂಡುಬಂದಿದೆ. ನಡುವೆ ಅಸ್ವಸ್ಥಗೊಂಡ 8 ವಿದ್ಯಾರ್ಥಿಗಳನನ್ನು ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ನಾಲ್ಕು ಮಕ್ಕಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹಾಗೂ ನಾಲ್ಕು ಮಕ್ಕಳನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾವಿ ನೀರಿಗೆ ಯಾರೋ ದುಷ್ಕರ್ಮಿಗಳು ವಿಷ ಬೆರೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. (ಎಂ.ಎನ್)

Leave a Reply

comments

Related Articles

error: