ಮೈಸೂರು

ಪಶುವೈದ್ಯೆ ಗೆ ಸಂತಾಪ ಸಲ್ಲಿಕೆ : ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ

ಮೈಸೂರು,ಡಿ.2:-  ಪಾತಿ ಫೌಂಡೇಷನ್ ಹಾಗೂ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಅಗ್ರಹಾರ ವೃತ್ತದಲ್ಲಿಂದು   ಪಶುವೈದ್ಯೆ   ಅವರ ಭಾವಚಿತ್ರ ಹಿಡಿದು ಮೌನಾಚರಣೆ ಮಾಡುವ ಮೂಲಕ ಸಂತಾಪ ಸಲ್ಲಿಸಲಾಯಿತು.

ಸಂತಾಪ ಸಭೆ ಉದ್ದೇಶಿಸಿ ಮಾತನಾಡಿದ ನಗರ ಮುಖ್ಯ ಪಶು ವೈದ್ಯಾಧಿಕಾರಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ ಡಿ ರಾಜಣ್ಣ  ಮಹಿಳೆಯರ ಸಬಲೀಕರಣ ಆಗಬೇಕು. ಮಹಿಳೆಗೆ ಸಮಾನತೆ ಕೊಡಬೇಕು. ಉದ್ಯೋಗ ನೀಡಬೇಕು ಹೀಗೆ ಚರ್ಚೆಯಾಗುವ ಮಾತುಗಳ ನಡುವೆ ಮೊದಲಿಗೆ ಕುಟುಂಬದ ಹೊರಗಡೆ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು.   ಉದ್ಯೋಗಸ್ಥ ವೈದ್ಯ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿ ಸಜೀವವಾಗಿ ದಹನ ಮಾಡಿರುವ ಪ್ರಕರಣ ಇಡೀ ಭಾರತೀಯರು ತಲೆ ತಗ್ಗಿಸುವಂತಹ  ವಿಷಯ.   ದೆಹಲಿಯ ನಿರ್ಭಯಾ ಪ್ರಕರಣದ ನಂತರ ದಕ್ಷಿಣ ಭಾರತದ ಕಡೆ ಇಂತಹ ಘಟನೆ ನಡೆದಿರುವುದು ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆಯಾಗಿದೆ. ಈ ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಬಗ್ಗೆ ಸಂವಿಧಾನ ತಿದ್ದುಪಡಿಯಾದರೂ ಸರಿ ಘೋರ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರು ಒತ್ತಾಯಿಸಬೇಕು ಎಂದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ  ನಾರಾಯಣ ಗೌಡ ಮಾತನಾಡಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ, ಹೈದರಾಬಾದಿನಲ್ಲಿ ವೈದ್ಯೆಯೋರ್ವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಸಾಮೂಹಿಕ ಅತ್ಯಾಚಾರ ನಡೆಸಿರುವ ಕಾಮುಕರು ಯುವತಿಯ ದೇಹವನ್ನು ಸುಟ್ಟು ಹಾಕಿದ್ದಾರೆ. ನಾಗರಿಕ ಪ್ರಪಂಚ ತಲೆ ತಗ್ಗಿಸುವ ವಿಚಾರ ಇದಾಗಿದೆ. ಮಹಿಳೆಯರು ಸ್ವತಂತ್ರವಾಗಿ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ’

ತೆಲಂಗಾಣ ಗೃಹಮಂತ್ರಿಯು ನೀಡಿದ ಹೇಳಿಕೆಯು ಅವರ ಕೀಳು ಮನಸ್ಸನ್ನು ಬಿಂಬಿಸುತ್ತದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕುರಿತು ಚರ್ಚೆ ಮಾಡುವ ಬದಲು ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಯುವತಿಯೇ ಸರಿ ಇಲ್ಲ ಎಂದು ಹೇಳುವುದು ಸ್ವಲ್ಪವೂ ಸರಿ ಇಲ್ಲ ಎಂದು ಕಿಡಿಕಾರಿದರು. ಓರ್ವ ಮಹಿಳೆ ಸಹಾಯವನ್ನು ಕೋರಿದಾಗ ಆ ಮಹಿಳೆಯನ್ನು ಅತ್ಯಾಚಾರ ಮಾಡಿ ಜೀವಂತ ಇರುವಾಗಲೇ ಸುಟ್ಟು ಹಾಕಿರುವ ಆರೋಪಿಗಳು ಭೂಮಿಯ ಮೇಲೆ ಇರಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ತೆಲಂಗಾಣ ಸರ್ಕಾರ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು  ಆಗ್ರಹಿಸಿದರು.

ಈ ಸಂದರ್ಭ ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ,ಅಪೂರ್ವ ಸುರೇಶ್ ,ಕಡಕೊಳ ಜಗದೀಶ್ ,ಮೈಸೂರು ರಕ್ಷಣಾ ವೇದಿಕೆಯ ಉಪಾಧ್ಯಕ್ಷ  ಕುಮಾರಗೌಡ ,ರಾಕೇಶ್ ಭಟ್ ,ಆನಂದ್ ,ಮಂಜುನಾಥ್, ಮಧು ಎನ್ ಪೂಜಾರ್,ಚಕ್ರಪಾಣಿ  ಲೋಹಿತ್,ಬ್ರಹ್ಮೇಂದ್ರ, ಇಕ್ಬಾಲ್ ,ಮೊಹಮ್ಮದ್ ಸಫಿ , ಮಹದೇವಣ್ಣ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: