ಪ್ರಮುಖ ಸುದ್ದಿ

ವಿಶ್ವ ಏಡ್ಸ್ ದಿನಾಚರಣೆ : ದುಶ್ಚಟಗಳಿಗೆ ದಾಸರಾಗಬೇಡಿ : ನ್ಯಾಯಾಧೀಶೆ ನೂರುನ್ನಿಸ ಕಿವಿಮಾತು

ರಾಜ್ಯ( ಮಡಿಕೇರಿ) ಡಿ.2 :- ದುಶ್ಚಟಗಳಿಗೆ ದಾಸರಾಗದೆ ಪ್ರತಿಯೊಬ್ಬರೂ ಶಿಸ್ತುಬದ್ಧ ಜೀವನ ನಡೆಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ನೂರುನ್ನಿಸ ಅವರು ಕಿವಿಮಾತು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ಒಡಿಪಿ-ಸ್ನೇಹಾಶ್ರಯ ಸಮಿತಿ ಆಶೋದಯ ಸಮಿತಿ, ಕಿರಿಯ ಮಹಿಳಾ ಆರೋಗ್ಯ ತರಬೇತಿ ಕೇಂದ್ರ, ಸ್ನೇಹಾಶ್ರಯ ಯೂತ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬದುಕು ಸುಂದರವಾಗಬೇಕಾದರೆ ದುಶ್ಚಟಗಳಿಂದ ದೂರ ಉಳಿಯಬೇಕು, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಜಿ.ಪಂ.ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ ಯುವಜನರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಯುತ ಬದುಕು ನಡೆಸುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಪ್ರತಿಯೊಬ್ಬರಲ್ಲಿಯೂ ಎಚ್‍ಐವಿ ಏಡ್ಸ್ ಬಗ್ಗೆ ಜಾಗೃತಿ ಇರಬೇಕು. ಎಚ್‍ಐವಿ ಏಡ್ಸ್ ಪೀಡಿತರನ್ನು ಯಾವುದೇ ಕಾರಣಕ್ಕೂ ತಾರತಮ್ಮದಿಂದ ನೋಡಬಾರದು ಎಂದರು.
ಪ್ರತಿಯೊಬ್ಬರಲ್ಲಿಯೂ ಎಚ್‍ಐವಿ ಏಡ್ಸ್ ಬಗ್ಗೆ ಜಾಗೃತಿ ಇರಬೇಕು. ಎಚ್‍ಐವಿ ಏಡ್ಸ್ ಪೀಡಿತರನ್ನು ಯಾವುದೇ ಕಾರಣಕ್ಕೂ ತಾರತಮ್ಮದಿಂದ ನೋಡಬಾರದು ಎಂದು ಅವರು ಹೇಳಿದರು.
ರೆಡ್‍ಕ್ರಾಸ್ ಸಂಸ್ಥೆಯ ರವೀಂದ್ರ ರೈ ಅವರು ಮಾತನಾಡಿ ವರ್ಷದಿಂದ ವರ್ಷಕ್ಕೆ ಎಚ್‍ಐವಿ ಏಡ್ಸ್ ಪೀಡಿತರು ಕಡಿಮೆಯಾಗುತ್ತಿದ್ದು, ಆ ನಿಟಿನ್ಟಲ್ಲಿ ಸಂಪೂರ್ಣ ನಿರ್ಮೂಲನೆಗೆ ಪಣ ತೊಡಬೇಕು ಎಂದು ಅವರು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎನ್.ಆನಂದ್ ಅವರು ಮಾತನಾಡಿ ಎಚ್‍ಐವಿ ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ವೈರಾಣುವಾಗಿದ್ದು, ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದ ಸೋಂಕಿತ ರಕ್ತ ಮತ್ತು ರಕ್ತ ಉತ್ಪನ್ನಗಳ ವರ್ಗಾವಣೆ, ಸಂಸ್ಕರಿಸದ ಚೂಪು ಸಾಧನಗಳು, ಸಿರಿಂಜು, ಶಸ್ತ್ರ ಕ್ರಿಯಾ ಸಾಧನಗಳನ್ನು ಬಳಸುವುದರಿಂದ ಎಚ್‍ಐವಿ ಹರಡುವ ಸಾಧ್ಯತೆ ಇದೆ ಎಂದರು.
ಎಚ್‍ಐವಿ ಯಿಂದ ತೂಕ ಕಡಿಮೆಯಾಗುವುದು, ಒಂದು ತಿಂಗಳವರೆಗೆ ನಿರಂತರ ಭೇದಿಯಾಗುವುದು, ಜ್ವರ ಬರುವುದು, ಕ್ಷಯ ಸೋಂಕಿತ, ಬಾಯಿ, ಗಂಟಲು ಮತ್ತು ಅನ್ನನಾಳಗಳಲ್ಲಿ ಬಿಳಿ ಪೊರೆ ಹುನ್ನುಗಳಾಗುವುದು, ನ್ಯೂಮೋನಿಯ ಸೋಂಕಿತ ಬರುವುದು, ಮೆದುಳಿಗೆ ಸೋಂಕಾಗುವುದು, ದೃಷಿ ಕಡಿಮೆಯಾಗುವುದು, ಚರ್ಮಕ್ಕೆ ಇತರೆ ಸೋಂಕು ತಗಲುವುದು ಮತ್ತಿತರ ಲಕ್ಷಣವಾಗಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶ ಪ್ರಕಾರ ಪ್ರಪಂಚದಲ್ಲಿ ಸುಮಾರು 37.9 ಮಿಲಿಯನ್ ಎಚ್‍ಐವಿ ಸೋಂಕಿತರು ಇದ್ದಾರೆ. 1.8 ಮಿಲಿಯನ್ ಹೊಸದಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. 2002 ರಿಂದ 2016 ರ ಮಧ್ಯದಲ್ಲಿ ಎಚ್‍ಐವಿ ಸೋಂಕಿತರಲ್ಲಿ ಶೇ.39 ರಷ್ಟು ಇಳಿಕೆ ಕಂಡು ಬಂದಿದೆ ಎಂದರು.
ದೇಶದಲ್ಲಿ ಒಟ್ಟು ಸುಮಾರು 21.40 ಲಕ್ಷ ಜನರು (ಶೇ.0.22 ) ಎಚ್‍ಐವಿ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ಸುಮಾರು 87.58 ಸಾವಿರ ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ. ಹಾಗೆಯೇ ರಾಜ್ಯದಲ್ಲಿ 2.47 ಲಕ್ಷ ಸೋಂಕಿತರು ಇದ್ದಾರೆ. ಅತಿ ಹೆಚ್ಚು ಎಚ್‍ಐವಿ ಸೋಂಕಿತರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ 6 ನೇ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಒಟ್ಟು 44 ಐಸಿಟಿಸಿ ಕೇಂದ್ರಗಳಿದ್ದು, 2018-19ರಲ್ಲಿ 22,689 ಸಾಮಾನ್ಯ ಜನರನ್ನು ಪರೀಕ್ಷಿಸಲಾಗಿದ್ದು, ಒಟ್ಟು 157 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ರಾಮಚಂದ್ರ ಕಾಮತ್ ಅವರು ಮಾತನಾಡಿದರು. ಎಚ್‍ಐವಿ ಏಡ್ಸ್ ಬಗ್ಗೆ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರತನ್ ತಮ್ಮಯ್ಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್, ಲಯನ್ ಸಂಸ್ಥೆಯ ಅಧ್ಯಕ್ಷರಾದ ಎಲ್.ಮೋಹನ್ ಕುಮಾರ್, ಇತರರು ಇದ್ದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕರಾದ ಸುನಿತಾ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅನಿತಾ ವಂದಿಸಿದರು.
ಎಚ್‍ಐವಿ ಏಡ್ಸ್ ಕುರಿತು ಜಾಗೃತಿ ಜಾಥಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ನಗರದ ಕೋಟೆ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎನ್.ಆನಂದ್, ರೋಟರಿ ಲಯನ್ಸ್ ಸಂಸ್ಥೆಯ ಪ್ರತಿನಿಧಿಗಳು ಇತರರು ಇದ್ದರು. ಆರೋಗ್ಯ, ಸಹಾಯಕಿಯರು, ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು. ಜಾಥವು ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತದ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜಿನವರೆಗೆ ಜಾಥ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಗುಂಡುರಾಜು ಅವರ ತಂಡವು ತೊಗಲು ಗೊಂಬೆ ಪ್ರದರ್ಶಿಸಿ ಗಮನ ಸೆಳೆದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: