ಮೈಸೂರು

ಪೊಲೀಸ್ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಖೈದಿಗಳಿಗೆ 7ವರ್ಷ ಜೈಲು

ಮೈಸೂರು,ಡಿ.3:- ಪೊಲೀಸ್ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ ನಡೆಸಿ ಕೆ.ಆರ್.ಆಸ್ಪತ್ರೆಯಲ್ಲಿರುವ ಜೈಲ್ ವಾರ್ಡಿನಿಂದ ತಪ್ಪಿಸಿಕೊಂಡಿದ್ದ  ಇಬ್ಬರು ಖೈದಿಗಳಿಗೆ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೈಸೂರು ಕಾರಾಗೃಹದಲ್ಲಿದ್ದ ಸುನೀಲ್ ಹಾಗೂ ಸತೀಶ್ ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ್ದ ಸತೀಶ್, ಸುನಿಲ್ ತಿಮ್ಮರಾಜು ಅನಾರೋಗ್ಯದಿಂದ ಬಳಲುತ್ತಿದ್ದರೆಂದು ಕೆ.ಆರ್.ಆಸ್ಪತ್ರೆಯ ಜೈಲ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 2011ರ ಜೂ.18ರಂದು ಈ ಮೂವರು ಅಲ್ಲಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದರು. ತಿಮ್ಮರಾಜು ಎಂಬಾತ ನೆಲದ ಮೇಲೆ ಹೊರಳಾಡಿ ಪಿಟ್ಸ್ ಬಂದವನಂತೆ ನಟಿಸಿದ್ದ. ವಾರ್ಡಿನ ಹೊರಗೆ ಕಾವಲಿದ್ದ ಸಿಎಆರ್ ಸಿಬ್ಬಂದಿ ರಾಧಾಕೃಷ್ಣ ತಿಮ್ಮರಾಜುಗೆ ಏನಾಯಿತೆಂದು ವಿಚಾರಿಸಲು ಸೆಲ್ ಬಳಿಗೆ ತೆರಳಿದಾಗ ತಿಮ್ಮರಾಜುಗೆ ಪಿಟ್ಸ್ ಬಂದಿದೆ ಎಂದು ಸತೀಶ್ ಹಾಗೂ ಸುನಿಲ್ ತಿಳಿಸಿದ್ದು, ಹತ್ತಿರಕ್ಕೆ ಬಂದು ಕಂಬಿಯ ಒಳಗೆ ಕೈಹಾಕಿ ರಾಧಾಕೃಷ್ಣ ಅವರ   ಕುತ್ತಿಗೆಯನ್ನು ಬಲವಾಗಿ ಹಿಡಿದು ಪ್ರಜ್ಞೆ ತಪ್ಪುವಂತೆ ಮಾಡಿ ಅವರ ಜೇಬಿನೊಳಗಿದ್ದ  ಸೆಲ್ ನ ಕೀ ಪಡೆದು ಸೆಲ್ ನೊಳಗೆ ನೂಕಿ ಅಲ್ಲಿಂದ ಪರಾರಿಯಾಗಿದ್ದರು.

ಕೆಲವು ಸಮಯದ ಬಳಿಕ ಮೇಲೆದ್ದ ರಾಧಾಕೃಷ್ಣ ಅವರು ಘಟನೆಯ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ವಿಚಾರಣೆಗೊಳಪಟ್ಟ ತಿಮ್ಮರಾಜು ಮೃತಪಟ್ಟಿದ್ದು, ಸುನಿಲ್ ಹಾಗೂ ಸತೀಶ್ ಮೇಲಿನ ಆರೋಪ ಸಾಬೀತಾಗಿದ್ದು, ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಇಬ್ಬರಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: