ಪ್ರಮುಖ ಸುದ್ದಿ

ಕಾಡಾನೆ ಉಪಟಳ ತಡೆಗೆ ಆಗ್ರಹ : ಅರಣ್ಯಾಧಿಕಾರಿಗಳಿಗೆ ಸೋಮವಾರಪೇಟೆ ತಾಲ್ಲೂಕು ಗ್ರಾಮಸ್ಥರಿಂದ ಮನವಿ

ರಾಜ್ಯ( ಮಡಿಕೇರಿ) ಡಿ.4 :- ಸೋಮವಾರಪೇಟೆ ತಾಲ್ಲೂಕಿನ ಐಗೂರು, ಕಾಜೂರು, ಯಡವಾರೆ, ಗರ್ವಾಲೆ ಮುಂತಾದ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರಿಗೆ ಮನವಿ ಸಲ್ಲಿಸಿದರು.
ಮಡಿಕೇರಿಯ ಅರಣ್ಯ ಭವನದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ ಗ್ರಾಮಸ್ಥರು ಕಾಡಾನೆ ಹಾವಳಿ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಕಾಫಿ ಬೆಳೆಗಾರ ಮಚ್ಚಂಡ ಪ್ರಕಾಶ್ ಬೆಳ್ಯಪ್ಪ, ಸೋಮವಾರಪೇಟೆ ತಾಲೂಕಿನ ಗರ್ವಾಲೆ, ಐಗೂರು, ಯಡವಾರೆ, ಕಾಜೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಕಾಫಿ ಮತ್ತು ಕಾಳುಮೆಣಸು ದರ ಕುಸಿದಿದ್ದು, ಬೆಳೆಗಾರರು ನಷ್ಟದಲ್ಲಿದ್ದಾರೆ. ಈ ನಡುವೆಯೇ ಕಾಡಾನೆಗಳ ಹಾವಳಿ ಬೆಳೆಗಾರರನ್ನು ಮತ್ತಷ್ಟು ಕಂಗೆಡಿಸಿದ್ದು ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡು ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು. ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಬೆಳೆಗಾರರು, ರೈತರು, ಕಾಡಾನೆ ಹಾವಳಿಗೆ ತುತ್ತಾಗಿರುವ ಸೋಮವಾರಪೇಟೆ ತಾಲ್ಲೂಕಿನ ಎಲ್ಲಾ ಗ್ರಾಮಸ್ಥರು ಸೇರಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮತ್ತೊಬ್ಬ ಬೆಳೆಗಾರ ಮನೋಜ್ ಕುಮಾರ್ ಮಾತನಾಡಿ, ಗ್ರಾಮ ಗ್ರಾಮಗಳಲ್ಲಿ ಐದರಿಂದ ಆರು ಕಾಡಾನೆಗಳ ಹಿಂಡು ಲಗ್ಗೆ ಇಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆ, ಕೃಷಿ ಕಾರ್ಯಕ್ಕಾಗಿ ಬಳಸುತ್ತಿರುವ ಕೊಳವೆಬಾವಿ, ಪೈಪ್‍ಗಳನ್ನು ನಾಶಪಡಿಸುತ್ತಿವೆ. ಈ ಬಗ್ಗೆ ಆರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು 8 ರಿಂದ 10 ಕಿ.ಮೀ ದೂರ ರೈಲ್ವೆ ಬ್ಯಾರಿಕೇಡ್‍ನ್ನು ಅಳವಡಿಸಬೇಕೆಂದು ಮನವಿ ಮಾಡಿದರು.
ಬೆಳೆಗಾರರ ಮನವಿಗೆ ಸ್ಪಂದಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಈಗಾಗಲೇ ಆನೆ ಹಾವಳಿ ತಡೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಸೋಮವಾರಪೇಟೆ ವ್ಯಾಪ್ತಿಯಲ್ಲೂ ರೈಲ್ವೆ ಬ್ಯಾರಿಕೇಡ್, ಇಪಿಟಿ, ಸೌರಬೇಲಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಕಾಡಾನೆ ಹಾವಳಿ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಸೋಮವಾರಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳ ಬೆಳೆಗಾರರಾದ ಸದಾಶಿವ, ಅಶೋಕ್, ಭರತ್, ಲಿಂಗೇರಿ ರಾಜೇಶ್, ಪ್ರಮೋದ್, ರಾಮಚಂದ್ರ, ಯೋಗೇಶ್ ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: