ಮೈಸೂರು

ವೀಸಾ ಸಮಸ್ಯೆ ಬಗೆಹರಿದ ಹಿನ್ನೆಲೆ ಶುಕ್ರವಾರ ಅಮೇರಿಕಾಗೆ ತೆರಳಲಿರುವ ಅಭಿಷೇಕ್ ಕುಟುಂಬ

ಮೈಸೂರು, ಡಿ.4:-  ಅಮೇರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ  ಮೈಸೂರಿನ ಕುವೆಂಪುನಗರ ನಿವಾಸಿ ಅಭಿಷೇಕ್ ಕುಟುಂಬದವರು  ವೀಸಾ ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ   ಅಮೆರಿಕಕ್ಕೆ ತೆರಳಲಿದ್ದಾರೆ. ಅಭಿಷೇಕ್ ತಂದೆ-ತಾಯಿ, ಸೋದರ ಮತ್ತು ಇಬ್ಬರು ಸಂಬಂಧಿಗಳು ಸೇರಿ ಒಟ್ಟು ಐದು ಮಂದಿ ಶುಕ್ರವಾರ ಬೆಳಗಿನ ಜಾವ 1.15ಕ್ಕೆ ಬೆಂಗಳೂರಿನಿಂದ ವಿಮಾನದಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ.

ಕಳೆದ ಶುಕ್ರವಾರ ಅಮೆರಿಕದಲ್ಲಿ ಅಭಿಷೇಕ್ ಗುಂಡೇಟಿಗೆ ಬಲಿಯಾದ ಸುದ್ದಿ ಕೇಳಿ ಇಡೀ ಕುಟುಂಬ ಅಘಾತಗೊಂಡಿತ್ತು. ಆದರೆ, ತಕ್ಷಣ ಮನೆಯ ಎಲ್ಲಾ ಸದಸ್ಯರು ಅಮೆರಿಕಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಅಭಿಷೇಕ್‌ನ ಸೋದರ ಅಭಿಶೇಷ್ಠ ಅವರಿಗೆ ವೀಸಾ ಸಿಗದೇ ಇದ್ದುದ್ದರಿಂದ ಕಳೆದ ಆರು ದಿನಗಳಿಂದ ಅಮೆರಿಕಾಗೆ ತೆರಳಲು ಸಾಧ್ಯವಾಗಿರಲಿಲ್ಲ.

ಸ್ಥಳೀಯ ಸಂಸದರು, ತುರ್ತಾಗಿ ಪಾಸ್‌ಪೋರ್ಟ್ ಮತ್ತು ವೀಸಾ ನೀಡುವಂತೆ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಅಭಿಶೇಷ್ಠ ಅವರಿಗೆ ಪಾಸ್‌ಪೋರ್ಟ್‌ನ್ನು ನೀಡಲಾಯಿತು. ಮಂಗಳವಾರ ಬೆಳಗ್ಗೆ ವೀಸಾ ಪಡೆಯಲು ಅಭಿಶ್ರೇಷ್ಠ ಚೆನ್ನೈಗೆ ತೆರಳಿದ್ದು, ಕಚೇರಿ ವೇಳೆಯೊತ್ತಿಗೆ ತಲುಪಲು ಸಾಧ್ಯವಾಗದೇ ಇದ್ದುದ್ದರಿಂದ ಬುಧವಾರ ಬೆಳಗ್ಗೆ ವೀಸಾ ಪಡೆದು, ನೇರವಾಗಿ ಗುರುವಾರ ಬೆಂಗಳೂರಿಗೆ ತೆರಳಲಿದ್ದಾರೆ. ಈ ಮಧ್ಯೆ ಅಭಿಷೇಕ್‌ನ ತಂದೆ ಸುದೇಶ್ ಚಂದ್, ತಾಯಿ ನಂದಿನಿ ಐತಾಳ್ ಮತ್ತು ಸುದೇಶ್ ಚಂದ್ ಅವರ ಇಬ್ಬರು ಸೋದರರು, ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದು, ಅಲ್ಲಿಂದ ಒಟ್ಟಿಗೆ ಅಮೆರಿಕಾಕ್ಕೆ ತೆರಳಲಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: