ಮೈಸೂರು

ಮತ್ತೆ ನಗರದಲ್ಲಿ ಸರಗಳ್ಳರ ಕೈಚಳಕ: ನಗರದ ಮೂರು ಕಡೆ ಕಳ್ಳರ ಕರಾಮತ್ತು

ಮೈಸೂರಿನಲ್ಲಿ ಮತ್ತೆ ಸರಗಳ್ಳರು ತಮ್ಮ ಕೈಚಳಕ ತೋರಿದ್ದು ಜನತೆಯನ್ನು ಬೆಚ್ಚಿ ಬೀಳಿಸಿದ್ದಾರೆ.  ಸೋಮವಾರ ಮತ್ತೆ ನಗರದ ಕುವೆಂಪುನಗರ, ರಾಮಕೃಷ್ಣನಗರ ಮತ್ತು ಹೆಬ್ಬಾಳ ಲೇಔಟ್ ಗಳಲ್ಲಿ ಸರಗಳ್ಳರು ಸರ ಕಸಿದು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರು ಕಡೆಯೂ ಒಂದೇ ಗುಂಪಿನವರೇ ಕೃತ್ಯ ನಡೆಸಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮೊದಲನೆಯ ಪ್ರಕರಣದಲ್ಲಿ ರಾಮಕೃಷ್ಣ ನಗರದ ಚೂಡಾಮಣಿ(65)ಎಂಬ ಮಹಿಳೆಯ ಬಳಿ ಸೋಮವಾರ ಬೆಳಿಗ್ಗೆ 7.15ರ ಸುಮಾರಿಗೆ ಯೋಜನಾಪೂರ್ವಕವಾಗಿ ತೆರಳಿದ ಯುವಕರು ಅವರಲ್ಲಿ ಪದ್ಮಾ ಎಂಬ ಶಿಕ್ಷಕರ ಮನೆ ಎಲ್ಲಿದೆ ಎಂದು ವಿಳಾಸ ಕೇಳಿದ್ದಾರೆ. ಆದರೆ ಆ ಹೆಸರಿನವರು ಈ ವಠಾರದಲ್ಲಿ ಯಾರೂ ಇಲ್ಲ ಎನ್ನುತ್ತಿರುವಾಗಲೇ ಅವರ ಕತ್ತಿನಲ್ಲಿದ್ದ 45ಗ್ರಾಂ ತೂಕದ ಚಿನ್ನದ ಸರ ಎಗರಿಸಿ ಬೈಕ್ ನಲ್ಲಿ ಪರಾರಿಯಾಗಿದ್ದಾರೆ.

ಬಳಿಕ ಕೇವಲ ಅರ್ಧಗಂಟೆ ಅಂತರದಲ್ಲೇ 7.45ರಸುಮಾರಿಗೆ ಸರಗಳ್ಳರು ಸರಸ್ವತಿಪುರಂಗೆ ಧಾವಿಸಿದ್ದು, ಅಲ್ಲಿ ಗೌರಮ್ಮ(68)ಎಂಬ ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದಿದ್ದು, ಅವರು  ಏನಾಗುತ್ತಿದೆ ಎಂದು ಅರಿಯುವ ಮೊದಲೇ ಅವರ ಕತ್ತಿನಲ್ಲಿದ್ದ 60ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಬೆಳಿಗ್ಗೆ 8.15ರ ಸುಮಾರಿಗೆ ಹೆಬ್ಬಾಳ ಲೇಔಟ್ ನ ಶಕೀಲಾ ಬೇಗಂ ಎಂಬ ಮುಸ್ಲಿಂ ಮಹಿಳೆಯ ಬಳಿ ಆಗಮಿಸಿದ ಸರಗಳ್ಳರು ಅವರ ಬಳಿ ಉರ್ದುವಿನಲ್ಲಿ ಮಾತಾಡಿ ಅವರ ಕತ್ತಿನಲ್ಲಿದ್ದ 30ಗ್ರಾಂ ತೂಕದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ.

ಕುವೆಂಪು ನಗರ ಠಾಣೆಯ ಎಸಿಪಿ ಮಲ್ಲಿಕ್ ಘಟನೆ ನಡೆದ ರಾಮಕೃಷ್ಣನಗರ ಮತ್ತು ಸರಸ್ವತಿಪುರಂಗೆ ಭೇಟಿ ನೀಡಿದರೆ, ವಿಜಯನಗರ ಎಸಿಪಿ ಉಮೇಶ್ ಸೇಠ್ ಹೆಬ್ಬಾಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಕಳೆದೆರಡು ವರ್ಷಗಳಿಂದ ಸರಗಳ್ಳತನ ಹೆಚ್ಚುತ್ತಿದ್ದು, ಆರೋಪಿಗಳು ವಿಳಾಸ ಕೇಳುವುದನ್ನೇ ತಮ್ಮ ಕಳ್ಳತನಕ್ಕೆ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.  ಪೊಲೀಸರು 16ಮಂದಿಯನ್ನು ದಸ್ತಗಿರಿ ಮಾಡಿದ್ದು, ಅವರಲ್ಲಿ ಕೆಲವರು ಸರಗಳ್ಳತನದಲ್ಲಿ ತೊಡಗಿದ್ದರೆ, ಇನ್ಕೆಲವರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಅವರು ಇತ್ತೀಚೆಗೆ ಬೆಂಗಳೂರು ಮತ್ತು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ  ಬಂಧಿತರಾಗಿದ್ದರು ಆದರೆ ಮತ್ತೆ ಬೇಲ್ ಮೇಲೆ ಹೊರಬಂದಿದ್ದಾರೆ.  ಅದೇ ಗುಂಪು ಮತ್ತೆ ಸರಗಳ್ಳತನದಲ್ಲಿ ತೊಡಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ, ಅಥವಾ ಅನುಮಾನಾಸ್ಪದ ಬೈಕ್ ಗಳು ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ರಿಂಗ್ ರೋಡ್ ಸಮೀಪ ಮತ್ತು ವಸತಿ ನಿಲಯಗಳ ಸಮೀಪ ಸರಗಳ್ಳತನ ಹೆಚ್ಚುತ್ತಿದ್ದು ಸಿಸಿಟಿವಿ ಅಳವಡಿಸಲಾದ ಕಡೆ ಅದರ ಫೂಟೇಜ್ ಪಡೆದು ಪರಿಶೀಲನೆ ನಡೆಸಿದ್ದಾರೆ. ಬಂದೋಬಸ್ತ್ ಹೆಚ್ಚಿಸಲಾಗಿದ್ದು, ನಗರದೆಲ್ಲೆಡೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

Leave a Reply

comments

Tags

Related Articles

error: