ಮೈಸೂರು

ಯಾವುದೇ ರಾಜಕೀಯ ನಾಯಕರು ಸುದ್ದಿಗೋಷ್ಠಿ ನಡೆಸದಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್  ಎಚ್ಚರಿಕೆ ಸಂದೇಶ : ಸುದ್ದಿಗೋಷ್ಠಿ ಮೊಟಕುಗೊಳಿಸಿದ ಮಾಜಿ ಸಚಿವ ಸಾ.ರಾ.ಮಹೇಶ್

ಮೈಸೂರು,ಡಿ.4:- ಚುನಾವಣಾ ನೀತಿ ಸಂಹಿತೆ ಅಡ್ಡಿ ಹಿನ್ನೆಲೆಯಲ್ಲಿ  ಮಾಜಿ ಸಚಿವ ಸಾ.ರಾ.ಮಹೇಶ್ ಸುದ್ದಿಗೋಷ್ಠಿ ಮೊಟಕುಗೊಳಿಸಿದರು.

ಅವರಿಂದು ರಮಾ ವಿಲಾಸ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ   11 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದರು. ಆದರೆ, 10.30ಕ್ಕೆ ಯಾವುದೇ ರಾಜಕೀಯ ನಾಯಕರು ಸುದ್ದಿಗೋಷ್ಠಿ ಹಾಗೂ ಬಹಿರಂಗ ಹೇಳಿಕೆಯನ್ನು ನೀಡದಂತೆ ಎಚ್ಚರಿಕೆ ಸಂದೇಶವನ್ನು   ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್  ರವಾನಿಸಿದರು.

ಮಾತ್ರವಲ್ಲದೆ, ನಿನ್ನೆ ಸಂಜೆ ‌(ಡಿ.3) 6 ಗಂಟೆಯಿಂದ  ಮತದಾನ ಮುಕ್ತಾಯವಾಗುವವರೆಗೂ ರಾಜಕೀಯ ಮುಖಂಡರು ಪತ್ರಿಕಾಗೋಷ್ಠಿ ನಡೆಸುವುದಾಗಲಿ, ಮಾಧ್ಯಮಗಳಿಗೆ ಸಂದರ್ಶನ ನೀಡುವುದಾಗಲಿ ಮಾಡುವುದು ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 126ರ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಮಾಧ್ಯಮಗಳು ಸಹ‌ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಈ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಶಾಸಕ ಸಾ.ರಾ.ಮಹೇಶ್ ಯಾವುದೇ ಪ್ರತಿಕ್ರಿಯೆ ನೀಡದೇ ಸುದ್ದಿಗೋಷ್ಠಿ ರದ್ದುಗೊಳಿಸಿದರು. ಅಲ್ಲದೆ ಚುನಾವಣೆ ಬಳಿಕ ಮಾತನಾಡುವುದಾಗಿ ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: