ದೇಶಪ್ರಮುಖ ಸುದ್ದಿ

ನಗದು ವ್ಯವಹಾರದ ಮಿತಿ ತೆರವುಗೊಳಿಸುವಂತೆ ಬ್ಯಾಂಕ್‍ಗಳ ಮನವೊಲಿಕೆಗೆ ಕೇಂದ್ರ ಕಸರತ್ತು

ನವದೆಹಲಿ : ನಾಲ್ಕಕ್ಕಿಂತ ಹೆಚ್ಚಿನ ನಗದು ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಬ್ಯಾಂಕ್‍ಗಳ ನಿರ್ಧಾರ ಬದಲಾಯಿಸುವ ಸಂಬಂಧ ಬ್ಯಾಂಕ್‌ ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ದೇಶದ ಜನ ಏಕಾಏಕಿ ನಗದು ರಹಿತ ಡಿಜಿಟಲ್ ಅಥವಾ ಆನ್‍ಲೈನ್‍ ವ್ಯವಸ‍್ಥೆಗೆ ಹೊಂದಿಕೊಳ್ಳುವುದು ಸಾಧ್ಯವಿಲ್ಲ. ನಾಲ್ಕೇನಾಲ್ಕು ವ್ಯವಹಾರಗಳಿಗೆ ಅವಕಾಶ ನೀಡಿ ಐದನೇ ವ್ಯವಹಾರಕ್ಕೆ ಶುಲ್ಕ ವಿಧಿಸುವ ಬ್ಯಾಂಕ್‍ಗಳ ನಿರ್ಧಾರಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗತೊಡಗಿದೆ.

ಇದರಿಂದ ಎಚ್ಚೆತ್ತ ಕೇಂದ್ರ ಸರ್ಕಾರವು, ಬ್ಯಾಂಕ್‌ ಶಾಖೆಗಳಲ್ಲಿ ನಡೆಯುವ ನಗದು ವಹಿವಾಟಿನ ಮೇಲೆ ಶುಲ್ಕ ವಿಧಿಸುವುದನ್ನು ಸದ್ಯದ ಮಟ್ಟಿಗೆ ತಡೆಹಿಡಿಯುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ಮನವೊಲಿಸಲು ಮುಂದಾಗಿದೆ. ಶುಲ್ಕ ವಿಧಿಸುವ ನಿರ್ಧಾರವನ್ನು ಸಂಪೂರ್ಣ ವಾಪಸ್‌ ಪಡೆಯುವಂತೆ ಒತ್ತಾಯಿಸುವುದು ಅಥವಾ ವಹಿವಾಟಿನ ಮಿತಿಗಳ ಸಂಖ್ಯೆಯನ್ನು ಹೆಚ್ಚಿಸಲು ಮನವಿ ಮಾಡುವ ಕುರಿತು ಕೇಂದ್ರ ಚಿಂತನೆ ನಡೆಸಿದೆ.

ಭಾರತದ ಜನರಿಗೆ ನಗದುರಹಿತ ಡಿಜಿಟಲ್‌ ವ್ಯವಸ್ಥೆಗೆ ಹೊಂದಿಕೊಳ್ಳುವವರೆಗೆ ಇನ್ನಷ್ಟು ಸಮಯಾವಕಾಶ ನೀಡುವ ಅಗತ್ಯವಿದೆ ಎಂಬುದನ್ನು ಹಣಕಾಸು ಸಚಿವರು ಬ್ಯಾಂಕ್‌ಗಳಿಗೆ ಮನದಟ್ಟು ಮಾಡಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

comments

Related Articles

error: