ಮೈಸೂರು

ಭಾರತೀಯ ವೈದ್ಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿ : ಡಾ.ಹೆಚ್.ಸಿ.ಮಹದೇವಪ್ಪ

ಎಲ್ಲರಿಗೂ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸಂವಿಧಾನದ ಮೂಲ ಆಶಯವಾಗಿದ್ದು ಭಾರತೀಯ ವೈದ್ಯ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರೂ ಆರೋಗ್ಯವಂತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ಶನಿವಾರ ಆಯುಷ್ ಇಲಾಖೆ ವತಿಯಿಂದ ಕರ್ನಾಟಕ ಆರೋಗ್ಯ ಪದ್ದತಿ ಅಭಿವದ್ಧಿ ಮತ್ತು ಸುಧಾರಣೆ ಯೋಜನೆಯಲ್ಲಿ ಮೈಸೂರಿನ ಬೃಂದಾವನ ಬಡಾವಣೆಯ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದ 7.16ಕೋಟಿ ರೂ. ವೆಚ್ಚದ ಕಟ್ಟಡ ಮತ್ತು ಅಡುಗೆ ಮನೆ ನಿರ್ಮಾಣದ ಶಂಕುಸ್ಥಾಪನೆಯನ್ನು ನೇರವೇರಿಸಿದರು. ಬಳಿಕ ಮಾತನಾಡಿದ ಅವರು  ಹಿಂದೆ ಜನರು ಪ್ರಕೃತಿಗೆ ತಮ್ಮನ್ನು ತಾವು ತೆರೆದುಕೊಂಡಿದ್ದರು. ನಿಸರ್ಗದತ್ತವಾಗಿ ದೊರೆಯುವ ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯಯುತವಾಗಿದ್ದರು. ಆದರೆ ಇಂದು ಪ್ರಕೃತಿಯ ಸಮತೋಲನವನ್ನು ಹಾಳು ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ದೊರೆಯುವ ಆಹಾರ ಪದಾರ್ಥಗಳೆಲ್ಲ ರಾಸಾಯನಿಕಯುಕ್ತವಾಗಿವೆ. ಬದುಕಿನಲ್ಲಿ ಅತಿಯಾದ ಒತ್ತಡದಿಂದ ಆರೋಗ್ಯ ಹದಗೆಡುತ್ತಿದೆ. ಮೂಲ ಸೌಲಭ್ಯವನ್ನು ಕಲ್ಪಿಸುವ ನೆಪದಲ್ಲಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗಿ ಪ್ರಕೃತಿಯ ಸಮತೋಲನವೂ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

2000ನೇ ಇಸವಿಯಲ್ಲಿ ದೇಶದ ಎಲ್ಲರಿಗೂ ಆರೋಗ್ಯ ಸೌಲಭ್ಯ ನೀಡುತ್ತೇವೆ ಎಂದು ಭಾರತ ವಿಶ್ವಮಟ್ಟದ ಒಪ್ಪಂದಕ್ಕೆ ಸಹಿಹಾಕಿತ್ತು. ಆದರೆ 2017ಕ್ಕೆ ಬಂದರೂ ಆರೋಗ್ಯ ಸೌಲಭ್ಯ ನೀಡುವ ಆಶಯ  ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ಕಾಯಿಲೆಗಳು ಸೃಷ್ಟಿಯಾಗುತ್ತಿವೆ. ಅವುಗಳಿಗೆ ಔಷಧಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಅಲ್ಲದೆ ಸಾರ್ವಜನಿಕರಿಗೆ ಯಾವ ಕಾಯಿಲೆಯನ್ನು ಯಾವ ಹಂತದಲ್ಲಿ ಬಗೆಹರಿಸಿಕೊಳ್ಳಬೇಕು ಎಂಬ ತಿಳುವಳಿಕೆ, ಸಾವಧಾನ ಇಲ್ಲ. ಇಂದು ಮಹಿಳೆಯರು ಮಕ್ಕಳಿಗೆ ಎದೆ ಹಾಲು ಕುಡಿಸಲು ಸಿದ್ಧರಿಲ್ಲ. ಇದರಿಂದ ಹುಟ್ಟುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ವಿಜ್ಞಾನವನ್ನು ಧರ್ಮಕ್ಕೆ, ಜಾತಿಗೆ, ರಾಜಕೀಯಕ್ಕೆ ಸೀಮಿತಗೊಳಿಸಬಾರದು. ಸ್ಥಿರ ಅಭಿವೃದ್ಧಿ ಸಾಧಿಸಲು ಅವಕಾಶ ಮಾಡಿಕೊಡಬೇಕು. ಅಸಮಾನತೆಯನ್ನು ತೊಡೆದು ಹಾಕಬೇಕು. ಅತಿಯಾದ ಆರೋಗ್ಯ ಸಮಸ್ಯೆ ಹೊರೆಯಿಂದ ಹೊರಬರಬೇಕಾದರೆ ಭಾರತೀಯ ವೈದ್ಯಪದ್ದತಿಯಾದ ಆಯುರ್ವೇಧ, ಯುನಾನಿ, ಹೋಮೊಯೋಪತಿ, ಸಿದ್ಧೌಷಧದ ಮೊರೆ ಹೋಗಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಸಂಸದ ಪ್ರತಾಪಸಿಂಹ, ಭಾರತೀಯ ವೈದ್ಯ ಪದ್ಧತಿಗೆ ಹೆಚ್ಚು ಒತ್ತುನೀಡಿ ಹಿತ್ತಲಗಿಡ ಮದ್ದಲ್ಲ ಎಂಬ ಮನೋಭಾವವನ್ನು ಹೋಗಲಾಡಿಸುವ ಉದ್ದೇಶದಿಂದ ಆಯುರ್ವೇದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯುಪಿಎ ಸರ್ಕಾರ ಸರ್ವರಿಗೂ ಆರೋಗ್ಯಭಾಗ್ಯ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಹೆಲ್ತ್ ಮಿಷನ್ ಆರಂಭಿಸಿದ್ದು ಅದರ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರು ಯೋಗ ನಗರಿ ಎಂದು ಬಿಂಬಿತವಾಗಿದ್ದು ಈ ಬಾರಿಯ ವಿಶ್ವಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದೇನೆ. ರಾಜ್ಯ ಸರ್ಕಾರ ಈ ಸಂಬಂಧ ಅಧಿಕೃತ ಆಹ್ವಾನ ನೀಡಬೇಕು. ಅರಮನೆ ಆವರಣದಲ್ಲಿ ಸುಮಾರು 15 ಸಾವಿರ ಮಂದಿ ಯೋಗ ಮಾಡಬಹುದಾಗಿದ್ದು, ಯೋಗ ದಿನಾಚರಣೆಗೆ ಪ್ರಧಾನಿ ಆಗಮಿಸಿದರೆ ಮೈಸೂರಿನ ಹಿರಿಮೆ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ವಾಸು, ಉಪಮೇಯರ್ ರತ್ನ ಲಕ್ಷ್ಮಣ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಪಾಲಿಕೆ ಸದಸ್ಯರಾದ ಅನಸೂಯ, ನಾಗಭೂಷಣ್, ರಮೇಶ್, ಪ್ರಶಾಂತ್‍ಗೌಡ, ವಾಸು, ಭಾಗ್ಯವತಿ, ಪ್ರಕಾಶ್, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಉಮಾ ಸೌದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: