ಪ್ರಮುಖ ಸುದ್ದಿ

ಯಗಚಿಯಿಂದ ಹಾಸನಕ್ಕೆ ನೀರು ಪೂರೈಕೆಗೆ ವಿರೋಧ : ಚಿಕ್ಕಮಗಳೂರು ಸಂಪೂರ್ಣ ಬಂದ್‌

ಚಿಕ್ಕಮಗಳೂರು : ಯಗಚಿ ಜಲಾಶಯದಿಂದ ಹಾಸನ ನಗರಕ್ಕೆ ನೀರು ಪೂರೈಸುವುದನ್ನು ವಿರೋಧಿಸಿ ನಾಗರಿಕ ವೇದಿಕೆ ವತಿಯಿಂದ ಕರೆ ನೀಡಿದ್ದ ಶನಿವಾರದ ಬಂದ್‍ಗೆ ಸಾರ್ವಜನಿಕರಿಗೆ ಬೆಂಬಲ ವ್ಯಕ್ತವಾಗಿದೆ.

ಬೇಲೂರಿನ ಯಗಚಿಯಿಂದ ಹಾಸನಕ್ಕೆ ಪ್ರತಿ ದಿನ 20 ಕ್ಯೂಸೆಕ್‌ನಂತೆ 400 ಕ್ಯೂಸೆಕ್‌ ನೀರು ಕೊಡುವ ಸಂಬಂಧ ತೀವ್ರ ವಿರೋಧ ವ್ಯಕ್ತವಾಗಿದೆ. ಖಾಸಗಿ ವಾಹನ ಹೊರತುಪಡಿಸಿ, ಕೆಎಸ್‌ಆರ್‌ಟಿಸಿ, ನಗರ ಸಾರಿಗೆ ಬಸ್‌ಗಳು ರಸ್ತೆಯಲ್ಲಿ ಕಾಣಲಿಲ್ಲ. ಅಂಗಡಿಮುಂಗಟ್ಟು ಬಾಗಿಲು ಮುಚ್ಚಿ ವರ್ತಕರು, ವ್ಯಾಪಾರಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಟೊ ಸಂಚಾರವೂ ವಿರಳವಾಗಿದೆ.

ಔಷಧಿ ಅಂಗಡಿ ಮತ್ತು ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಹೋಟೆಲ್‌, ಚಿತ್ರಮಂದಿರ, ಪೆಟ್ರೊಲ್‍ಬಂಕ್‌ಗಳು ಬಾಗಿಲು ಮುಚ್ಚಿವೆ. ಬೆಳಿಗ್ಗೆ 6 ರಿಂದ ಆರಂಭವಾಗಿರುವ ಬಂದ್‌ ಸಂಜೆ 6ರ ವರೆಗೆ ಇರಲಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಸಂಖ್ಯೆ ವಿರಳವಾಗಿದೆ.

ಉಪವಾಸ ಸತ್ಯಾಗ್ರಹ :

ನೀರು ಪೂರೈಕೆಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘಟನೆಗಳು ಎಚ್ಚರಿಸಿವೆ. ಬಿಜೆಪಿ, ಬಿಎಸ್‌ಪಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ, ಸಿಪಿಐ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಜಿಲ್ಲಾ ವರ್ತಕರ ಸಂಘ, ಆಟೊ ಚಾಲಕರ ಸಂಘ, ವಿಎಚ್‌ಪಿ, ಬಜರಗಂದಳ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

Leave a Reply

comments

Related Articles

error: