ಮೈಸೂರು

ಡಿ.15 : ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾದ ವತಿಯಿಂದ ಬೃಹತ್ ಸಮಾವೇಶ : ಕುಮಾರ್ ಉಪ್ಪಾರ್ ಮಾಹಿತಿ

ಮೈಸೂರು,ಡಿ.5:- ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾದ ವತಿಯಿಂದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾದ ಅಧ್ಯಕ್ಷರಾದ ಕುಮಾರ್ ಉಪ್ಪಾರ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ   ಉಪ್ಪಾರ ಸಮಾಜವು ರಾಜ್ಯದಲ್ಲಿ 35 ರಿಂದ 40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಈ ಸಮಾಜಕ್ಕೆ ಆರ್ಥಿಕವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಮಾನ ಮತ್ತು ಸರಿಯಾದ ನ್ಯಾಯ ದೊರಕಿಸಲು ನಮ್ಮ ಸಮಾಜದ ಅನೇಕ ಹಿರಿಯರು, ಪೂಜ್ಯರು ಹಾಗೂ ಅನೇಕ ಸಂಘ – ಸಂಸ್ಥೆಗಳು , ಸಂಘಟನೆಗಳು ಸುಮಾರು ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿರುತ್ತಾರೆ.

ಆದರೆ ಫಲಿತಾಂಶ ಮಾತ್ರ ಬಹಳ ವಿರಳ.  ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಕೇವಲ ಮತದಾನದ ಸಮಯದಲ್ಲಿ ಮತಬ್ಯಾಂಕ್ ಆಗಿ ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಈ ಸಮಾಜವನ್ನು ನಿರಂತರವಾಗಿ ತಿರಸ್ಕರಿಸುತ್ತ ಬಂದಿವೆ.  ಈ ಸಮಾಜದಲ್ಲಿ ಕೇವಲ ಇಬ್ಬರು ಶಾಸಕರು , ಅದರಲ್ಲಿ ಒಬ್ಬರಿಗೆ ಮಂತ್ರಿ ಪದವಿ, ಒಬ್ಬರು ಎಂಎಲ್ ಸಿ, ಇಬ್ಬರು ನಿಗಮ ಮಂಡಳಿ, ಇನ್ನು ಜಿಲ್ಲಾ ಪಂಚಾಯತ್,ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಸಣ್ಣ ಪುಟ್ಟ ಹುದ್ದೆಗಳನ್ನು ಸ್ವೀಕರಿಸಿರುವುದನ್ನು ಬಿಟ್ಟರೆ, ಉನ್ನತ ಮಟ್ಟದ ಅಧಿಕಾರವನ್ನು ಯಾವುದೇ ರಾಜಕೀಯ ಪಕ್ಷಗಳು ನಮಗೆ ನೀಡಿಲ್ಲ ಎಂದರು.

ನಮ್ಮ ಸಮಾಜದ ನೌಕರರ ಮೇಲೆ ಹಲವಾರು ಇಲಾಖೆಗಳಲ್ಲಿ ನಿರಂತರವಾಗಿ ಅನ್ಯಾಯ / ದೌರ್ಜನ್ಯ ನಡೆಯುತ್ತಾ ಬಂದಿದೆ . ಈಗಲೂ ಸಹ ನಡೆಯುತ್ತಿದೆ . ಆದರೆ  ಪ್ರತಿಭಟಿಸಲು ಅವರಲ್ಲಿ ಸಂಘಟನಾ ಬಲ ಅಥವಾ ಸಂಘಟನೆಯ ಧ್ವನಿ ಇಲ್ಲ . ನಮ್ಮ ಸಮಾಜದ ಮಹಿಳೆಯರು ಸಹ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕಣಿಕವಾಗಿ ಮತ್ತು ರಾಜಕೀಯವಾಗಿ ತುಂಬಾ ಹಿಂದುದಿದ್ದಾರೆ.

ಈ ನಿಟ್ಟಿನಲ್ಲಿ ಡಿಸೆಂಬರ್ 15 ರ  ಭಾನುವಾರ  ಬೆಂಗಳೂರಿನ “ ಶಿಕ್ಷಕರ ಸದನದಲ್ಲಿ ಅಖಿಲ ಕರ್ನಾಟಕ ಉಪಾರ ಮಹಾಸಭಾ  ಬೆಂಗಳೂರು ಇವರ ನೇತೃತ್ವದಲ್ಲಿ ರಾಜ್ಯ ಮಟ್ಟದ  ಉಪ್ಪಾರ ನೌಕರರ , ವೃತ್ತಿಪರರ ಮತ್ತು ಮಹಿಳೆಯರ ಬೃಹತ್ ಸಮಾವೇಶ   ಹಾಗೂ   ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ   ಹಾಗೂ   ಸಾಧಕರಿಗೆ / ಹಿರಿಯರಿಗೆ ಗೌರವ ಸಮರ್ಪಣಾ  ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಗೋವಿಂದರಾಜು , ಮಹೇಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: