ದೇಶಪ್ರಮುಖ ಸುದ್ದಿ

ಇಸ್ರೋದಿಂದ ಎರಡು ಕಕ್ಷೆಗೆ 8 ಉಪಗ್ರಹ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಪಿಎಸ್ಎಲ್‍ವಿ ರಾಕೆಟ್ ಮೂಲಕ ಉಡಾವಣೆ ಮಾಡಿ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. 8 ಉಪಗ್ರಹಗಳಲ್ಲಿ ಭಾರತದ ಮೂರು ಮತ್ತು ವಿದೇಶದ ಐದು ಉಪಗ್ರಹಗಳಿವೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ 9.12ಕ್ಕೆ ಆರಂಭವಾದ ಉಡಾವಣಾ ಕಾರ್ಯ ಸಫಲವಾಗಿದೆ ಎಂದು ಇಸ್ರೋ ಘೋಷಿಸಿದೆ. ಸುಮಾರು 371 ಕೆಜಿ. ತೂಕವಿರುವ ಭಾರತದ ಬಹು ಉದ್ದೇಶಿತ ಪ್ರಮುಖ ಹವಾಮಾನ ಉಪಗ್ರಹ ಸ್ಕಾಟ್ಸ್ಯಾಟ್-1 ಉಡಾವಣೆಯಾದ ಸುಮಾರು 17 ನಿಮಿಷಗಳ ಅವಧಿಯಲ್ಲಿ ಪಿಎಸ್ಎಲ್‍ವಿ ಕಕ್ಷೆಗೆ ಸೇರಿಸಿದೆ. ಇದು ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನಕ್ಕೆ ಬಳಕೆಯಾಗಲಿದೆ. ‘ಸ್ಕಾಟ್ಸ್ಯಾಟ್-1’ ಉಪಗ್ರಹವು ಓಶಿಯನ್ ಸ್ಯಾಟ್-2 ಹವಾಮಾನ ವರದಿ ಮತ್ತು ಮುನ್ಸೂಚನೆ, ಗಾಳಿಯ ದಿಕ್ಕು ಮತ್ತು ಚಲನೆ ಸೇರಿ ಹಲವು ಪ್ರಮುಖ ದತ್ತಾಂಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ.

ಸ್ಕಾಟ್ಸ್ಯಾಟ್-1 ಅನ್ನು 730 ಕಿಮೀ ಸೂರ್ಯ ಸಮಕಾಲಿಕ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ.

ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ರೂಪಿಸಿರುವ ‘ಪ್ರಥಮ್’ ಉಪಗ್ರಹವು ಬಾಹ್ಯಾಕಾಶದಲ್ಲಿರುವ ಒಟ್ಟು ಎಲೆಕ್ಟ್ರಾನ್ ಕಣಗಳ ಬಗ್ಗೆ ಮಾಹಿತಿ ಒದಗಿಸಲಿದೆ.

ಬೆಂಗಳೂರಿನ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿರುವ ಪಿಸ್ಯಾಟ್ ಉಪಗ್ರಹ ಭೂಮಿಯ ಚಿತ್ರಗಳನ್ನು ತೆಗೆಯಲು ಸಹಕಾರಿಯಾಗಿದೆ.

 

Leave a Reply

comments

Tags

Related Articles

error: