ಮೈಸೂರು

ಮೂಲಭೂತ ಹಕ್ಕುಗಳ ಕುರಿತು ಗಮನವಹಿಸಿ ಕರ್ತವ್ಯ ಮರೆಯುತ್ತಿದ್ದೇವೆ : ಪಿ.ಜಿ.ಎಂ.ಪಾಟೀಲ್ ಬೇಸರ

ಮೂಲಭೂತ ಹಕ್ಕುಗಳ ಬಗ್ಗೆ ಮಾತ್ರ ಗಮನವಹಿಸಿ, ಮುಖ್ಯವಾದ ಕರ್ತವ್ಯಗಳನ್ನು ಮರೆಯುತ್ತಿದ್ದೇವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾರಾಣಿ ಮಹಿಳಾ ಕಲಾ ಕಾಲೇಜು ಮತ್ತು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಮಹಾರಾಣಿ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಮೂಲಭೂತ ಕರ್ತವ್ಯಗಳ ಕುರಿತು ಕಾನೂನು ಅರಿವು-ನೆರವು ವಿಚಾರ ಸಂಕಿರಣ’ ವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ಸಂವಿಧಾನದ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕು. ಪ್ರತಿಯೊಬ್ಬರಿಗೂ ದೇಶದ ಕಾನೂನಿನ ಅರಿವಿರಬೇಕು. ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡಿ. ನಮ್ಮ ಸಂವಿಧಾನ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸಿ. ಭಾರತದ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲು ಎಲ್ಲರೂ ಹೋರಾಡಬೇಕು ಎಂದು ಹೇಳಿದರು.

1976 ರಲ್ಲಿ 42 ನೇ ತಿದ್ದುಪಡಿ ತಂದು 51ಎ ವಿಧಿಯಲ್ಲಿ ಮೂಲಭೂತ  ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು. ಸಂವಿಧಾನ ರಚನಾಕಾರರು ಹಕ್ಕುಗಳ ಬಗ್ಗೆಯೂ ಯೋಚಿಸಿ ನಾವು ನೆಮ್ಮದಿಯಿಂದ ಜೀವನ ಮಾಡಲು ಮೂಲಭೂತ ಹಕ್ಕುಗಳನ್ನು ಸೇರ್ಪಡೆ ಮಾಡಿದರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೊಹಮ್ಮದ್ ಮುಜೀರುಲ್ಲಾ ಸಿ.ಜಿ  ಮಾತನಾಡಿ, ನಮ್ಮ ಸಂವಿಧಾನದಲ್ಲಿರುವ ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡದಿದ್ದರೆ ಶಿಕ್ಷೆ ವಿಧಿಸಿ ಎಂಬ ಯಾವ ಕಟ್ಟುಪಾಡುಗಳಿಲ್ಲ. ಒಂದು ಪಕ್ಷ ಈ ಕರ್ತವ್ಯಗಳನ್ನು ಎಲ್ಲರೂ ಸರಿಯಾದ ರೀತಿಯಲ್ಲಿ ಪಾಲಿಸಿದ್ದರೆ ಈ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಸಂವಿಧಾನದ ಬಗ್ಗೆ ತಿಳಿದು ನಂತರ ಮರೆಯುತ್ತಿದ್ದಾರೆ. ಅನಕ್ಷರಸ್ಥ ಪ್ರಜೆಗಳಿಗೆ ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಸಹ ಕಾನೂನು ಪಾಲಿಸುವ ಪ್ರಜೆಗಳಾಗಬೇಕು. ಎಲ್ಲರಲ್ಲೂ ಕಾನೂನು ಪ್ರಜ್ಞೆ ಮೂಡಬೇಕು. ಸಂವಿಧಾನಕ್ಕೆ ಬದ್ಧರಾಗಿರಬೇಕು ಎಂದರು.

ಯಾರಾದರೂ ತಮ್ಮ ಧರ್ಮದ ಬಗ್ಗೆ ಅವಹೇಳನ ಮಾಡಿದಾಗ ಸಿಟ್ಟಾಗುವ ಜನ, ಕರ್ತವ್ಯಗಳನ್ನು ಪಾಲಿಸದಿದ್ದರೆ ಯಾರೂ ಸಹ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಬೇರೆಯವರ ತಪ್ಪುಗಳನ್ನು ಖಂಡಿಸುವುದು ಸಹ ಮೂಲಭೂತ ಕರ್ತವ್ಯಗಳ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್ ಕಾರ್ಯಕ್ರಮದ ಅಧ‍್ಯಕ್ಷತೆಯನ್ನು ವಹಿಸಿದ್ದರು. ವಕೀಲರ ಸಂಘದ ಅಧ‍್ಯಕ್ಷ ರಾಮಮೂರ್ತಿ ಜಿ.ವಿ, ಮಾಜಿ ಕುಲಸಚಿವ ಹಾಗೂ ಕಾನೂನು ಪ್ರಾಧ‍್ಯಾಪಕ ಪ್ರೊ.ಸಿ ಬಸವರಾಜು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಅಧ‍್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ವಕೀಲ ಎ.ಎಂ.ಭಾಸ್ಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Leave a Reply

comments

Related Articles

error: