
ಕರ್ನಾಟಕಪ್ರಮುಖ ಸುದ್ದಿ
`ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ವೀಕ್ಷಿಸಲಿರುವ ಸಿಎಂ ಯಡಿಯೂರಪ್ಪ
ಬೆಂಗಳೂರು,ಡಿ.5-ನವರಸ ನಾಯಕ ಜಗ್ಗೇಶ್ ಅಭಿನಯದ `ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ರಾಜ್ಯದ ಇತರ ಸಚಿವರು ವೀಕ್ಷಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ಕವಿರಾಜ್, ಯಡಿಯೂರಪ್ಪ, ಸುರೇಶ್ ಕುಮಾರ್ ಸೇರಿದಂತೆ ಇತರೆ ಸಚಿವರಿಗೆ ಸಿನಿಮಾ ತೋರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಚಿತ್ರ ಎಲ್ಲಾ ವಯೋಮಾನದವರನ್ನೂ ಸೆಳೆಯುತ್ತಿದೆ. ಚಿತ್ರಮಂದಿರದಿಂದ ದೂರ ಉಳಿದಿದ್ದ ಹದಿಹರೆಯದವರನ್ನು ಮತ್ತೆ ಈ ಚಿತ್ರ ಕರೆತಂದಿದೆ. ಇದು ನಮಗೆ ಬಹಳ ಖುಷಿ ಕೊಟ್ಟಿದೆ ಎಂದಿದ್ದಾರೆ.
ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಚಿತ್ರತಂಡಕ್ಕೆ ಅಪಾರ ಖುಷಿ ತಂದಿದೆ. ‘ರಾಜ್ಯದಾದ್ಯಂತ ಎಲ್ಲಾ ಊರುಗಳಲ್ಲೂ ಪ್ರದರ್ಶನ ಜಾಸ್ತಿಯಾಗಿದೆ. ಚಿತ್ರಮಂದಿರದಿಂದ ತೆಗೆದಿದ್ದವರೆಲ್ಲಾ ಈಗ ಮತ್ತೆ ಚಿತ್ರ ಪ್ರದರ್ಶನ ಮಾಡುತ್ತಿದ್ದಾರೆ. ವೀಕ್ ಡೇಸ್ನಲ್ಲೂ ಹೌಸ್ಫುಲ್ ಕಾಣುತ್ತಿದೆ. 25 ವರ್ಷಗಳಿಂದ ಸಿನಿಮಾ ನೋಡದವರು ಕೂಡಾ ಈ ಸಿನಿಮಾ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಟ ಜಗ್ಗೇಶ್, ಶಿಕ್ಷಣ ವ್ಯವಸ್ಥೆ ಕುರಿತಾದ ಈ ಚಿತ್ರವನ್ನು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೂ ತೋರಿಸಿದರೆ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಸುಧಾರಿಸುತ್ತೆ ಎಂಬ ನಂಬಿಕೆ ನಮಗಿದೆ. ಈ ಹಿಂದೆಯೇ ಅವರಿಗೆ ಸಿನಿಮಾವನ್ನು ತೋರಿಸಬೇಕೆಂದುಕೊಂಡಿದ್ದೆವು. ಉಪ ಚುನಾವಣೆ ಕಾರಣದಿಂದಾಗಿ ತೋರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. (ಎಂ.ಎನ್)