ಕ್ರೀಡೆದೇಶ

ಹುಟ್ಟುಹಬ್ಬದ ಸಂಭ್ರಮದಲ್ಲಿ ಟೀಂ ಇಂಡಿಯಾದ ನಾಲ್ವರು ಆಟಗಾರರು

ನವದೆಹಲಿ,ಡಿ.6-ಟೀಂ ಇಂಡಿಯಾದ ನಾಲ್ವರು ಪ್ರಮುಖ ಆಟಗಾರರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್, ಕರುಣ್ ನಾಯರ್ ಅವರಿಗೆ ಜನ್ಮದಿನದ ಸಂಭ್ರಮ.

ಜಸ್ಪ್ರೀತ್ ಬುಮ್ರಾ 26, ರವೀಂದ್ರ ಜಡೇಜಾ 31, ಶ್ರೇಯಸ್ ಅಯ್ಯರ್ 25 ಹಾಗೂ ಕರುಣ್ ನಾಯರ್ 28ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಇವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ವಿಡಿಯೋ ಮೂಲಕ ಟ್ವಿಟರ್ ನಲ್ಲಿ ಶುಭ ಹಾರೈಸಿದೆ. ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ಆಟಗಾರನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಪೈಕಿ ರವೀಂದ್ರ ಜಡೇಜಾ ಹಾಗೂ ಶ್ರೇಯಸ್ ಅಯ್ಯರ್ ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯದ ಮೂಲಕ ತಮ್ಮ ಬರ್ತ್‌ಡೇಗಳನ್ನು ಸ್ಮರಣೀಯವಾಗಿಸುವ ಇರಾದೆಯಲ್ಲಿದ್ದಾರೆ.

ಓರ್ವ ಆಲ್‌ರೌಂಡರ್ ಆಗಿ ರವೀಂದ್ರ ಜಡೇಜಾ ಮೂಡಿ ಬಂದಿರುವ ರೀತಿಯು ಎಲ್ಲರಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲೂ ತಮ್ಮ ಗಮನಾರ್ಹ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಅತ್ತ ಶ್ರೇಯಸ್ ಅಯ್ಯರ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿದ್ದು, ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವೆನಿಸಿದ್ದಾರೆ.

ಇನ್ನೊಂದೆಡೆ ಗಾಯದ ಸಮಸ್ಯೆಯಿಂದಾಗಿ ದೀರ್ಘ ಕಾಲದಿಂದ ಹೊರಗುಳಿದಿರುವ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿ ವೇಳೆಗೆ ತಂಡವನ್ನು ಸೇರಿಕೊಳ್ಳುವ ಇರಾದೆಯಲ್ಲಿದ್ದಾರೆ. ಅತ್ತ ಟೀಂ ಇಂಡಿಯಾದಿಂದ ಮೂಲೆ ಗುಂಪಾಗಿರುವ ತ್ರಿಶತಕ ವೀರ ಕರ್ನಾಟಕದ ಕರುಣ್ ನಾಯರ್, ಮಗದೊಮ್ಮೆ ಟೆಸ್ಟ್ ತಂಡವನ್ನು ಸೇರಿಕೊಳ್ಳುವ ಹಾದಿ ಕಠಿಣವೆನಿಸಿದೆ. (ಎಂ.ಎನ್)

 

Leave a Reply

comments

Related Articles

error: