ಪ್ರಮುಖ ಸುದ್ದಿ

ಡಿ.31 ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ರಾಜ್ಯ( ಮಡಿಕೇರಿ) ಡಿ.7 :- ಹೊಸ ವರ್ಷದ ಅಂಗವಾಗಿ ಕೊಂಡಂಗೇರಿ ಸಮೀಪದ ಎಲಿಯಂಗಾಡ್ ಫ್ರೆಂಡ್ಸ್ ಯುವಕ ಸಂಘದ ವತಿಯಿಂದ ಜಿಲ್ಲಾ ಮಟ್ಟದ ದ್ವಿತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಡಿ.31ರಂದು ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್ (ಅಂದಾಯಿ) ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ಸುಮಾರು 30 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಡಿ.31ರ ಬೆಳಗ್ಗೆ 10ಗಂಟೆಗೆ ಪಂದ್ಯಾವಳಿ ಆರಂಭವಾಗಲಿದ್ದು, ಸಂಜೆ 7ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಆದರೆ ಅಂತಿಮ ಪಂದ್ಯಾವಳಿ ಮಧ್ಯರಾತ್ರಿ ಜರುಗಲಿದೆ. ಸಮಾರೋಪ ಸಮಾರಂಭಕ್ಕೆ ಜಿಲ್ಲೆಯ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಪ್ರತಿನಿಧಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕುಗ್ರಾಮವಾಗಿರುವ ಎಲಿಯಂಗಾಡ್‍ನ ನೈಜ ಸ್ಥಿತಿಯನ್ನು ಮನದಟ್ಟು ಮಾಡುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುವುದಲ್ಲದೆ, ಪ್ರಸಕ್ತ ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಪ್ರಮುಖ ತರಬೇತುದಾರರಾದ ಹಾಲುಗುಂದ ನಿವಾಸಿ ಪಂದಿಕಂಡ ಸತೀಶ್ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಕೆ.ಗಫೂರ್, ಕಾರ್ಯದರ್ಶಿ ಕೆ.ಹೆಚ್. ಅನ್ವರ್, ಸದಸ್ಯರಾದ ಕೆ.ವೈ.ಅಬ್ದುಲ್ ಸಮದ್ ಹಾಗೂ ಶಾಹಿದ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: