ಮೈಸೂರು

ಮಾಹಿತಿ ತಂತ್ರಜ್ಞಾನ ಮನಸ್ಸಿನ ವೇಗಕ್ಕಿಂತ ಅತಿ ವೇಗವಾಗಿ ಓಡುತ್ತಿದೆ : ಬೆಟ್ ಸೂರ್ ಮಟ್

“ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯವು ಮೈಸೂರಿನಲ್ಲಿ ಉಳಿಯಲು ನನ್ನ ಶ್ರಮವೂ ಸ್ವಲ್ಪ ಮಟ್ಟಿಗೆ ಇದೆ” ಎಂದು ಮೈಸೂರು ಮಹಾನಗರ ಪಾಲಿಕೆಯ ನಿವೃತ್ತ ಕಮೀಷನರ್ ಡಾ.ಸಿ.ಜಿ.ಬೆಟ್ ಸೂರ್ ಮಟ್ ಅವರು ಹೇಳಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪುನಗರದ ಗಾನ ಭಾರತಿ ವೀಣೆಶೇಷಣ್ಣ ಭವನದಲ್ಲಿ ನಡೆದ ‘ಸಂಸ್ಥಾಪನಾ ದಿನಾಚರಣೆ’ ಮತ್ತು ‘ಕಲೆಯಲ್ಲಿ ತಂತ್ರಜ್ಞಾನದ ಪಾತ್ರ’ ಎಂಬ ರಾಜ್ಯಮಟ್ಟದ ಸೆಮಿನಾರನ್ನು ಉದ್ಘಾಟಿಸಿ  ಮಾತನಾಡಿದ ಅವರು, “ಆ ಸಮಯದಲ್ಲಿ ಬೇರೆ ಜಿಲ್ಲೆಗಳಲ್ಲಿ ಬೇಡಿಕೆ ಇದ್ದರೂ ಸಹ ಮೈಸೂರಿನಲ್ಲಿಯೇ ಸಂಗೀತ ವಿಶ್ವವಿದ್ಯಾನಿಲಯವನ್ನು ಉಳಿಸಿಕೊಳ್ಳಬೇಕೆಂಬ ಅಭಿಮಾನದಿಂದ ನಾನು ಪಟ್ಟ ಪ್ರಯತ್ನಕ್ಕೆ ತೃಪ್ತಿ ಸಿಕ್ಕಿದೆ. ಸಂಗೀತವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ” ಎಂದು ಹೇಳಿದರು. “ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುವದರಿಂದ ಜನರ ನಿರೀಕ್ಷೆಗಳು ಕೂಡ ಬದಲಾಗುತ್ತಿವೆ. ಮಾಹಿತಿ ತಂತ್ರಜ್ಞಾನವು ಮನಸ್ಸಿನ ವೇಗಕ್ಕಿಂತ ಅತಿ ವೇಗವಾಗಿ ಓಡುತ್ತಿದೆ. ಸಂಗೀತ ಕ್ಷೇತ್ರದಲ್ಲೂ ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ” ಎಂದರು.

“ಮೈಸೂರು ನಗರವು ಸ್ವಚ್ಛತಾ ನಗರಿ ಎಂದು ಹೆಸರು ಪಡೆದಿರುವುದಕ್ಕೆ ಅಧಿಕಾರಿಗಳು ಮಾತ್ರ ಕಾರಣರಲ್ಲ. ಸಾರ್ವಜನಿಕರು ಮುಖ್ಯ ಕಾರಣರಾಗಿದ್ದಾರೆ. ಇದೇ ತಿಂಗಳ 30 ರಂದು ಮತ್ತೆ ಮೈಸೂರು ನಗರಕ್ಕೆ “ಬಯಲು ಶೌಚಾಲಯ ಮುಕ್ತ ನಗರ” ಎಂಬ ಪ್ರಶಸ್ತಿ ಸಿಗಲಿದೆ” ಎಂದು ಸಂತೋಷ ವ್ಯಕ್ತಪಡಿಸಿದರು. “ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ಬಳಕೆಯ ಬಗ್ಗೆ ನಮ್ಮಲ್ಲಿ ತಿರಸ್ಕಾರ ಮನೋಭಾವನೆ ಹುಟ್ಟಬೇಕು. ಮೈಸೂರು ನಗರದ ಸ್ವಚ್ಛತೆಗಾಗಿ ನಾಗರೀಕನಾಗಿ ನಾನು  ಸಹ ನಿಮ್ಮ ಜೊತೆ ಕೈಜೋಡಿಸುತ್ತೇನೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಕೈಗಾರಿಕೋದ್ಯಮಿ ಹಾಗೂ ಕಲಾ ಪೋಷಕ ಕೆ.ವಿ.ಮೂರ್ತಿ “ಒಂದು ಸಂಸ್ಥೆಯ ಮೇಲೆ ಅಭಿಮಾನ ಇದ್ದಾಗ ಮಾತ್ರ ಆ ಸಂಸ್ಥೆ ಬೆಳೆಯಲು ಸಾಧ್ಯ.ಈ ಸಂಗೀತ ವಿಶ್ವವಿದ್ಯಾನಿಲಯವು ಅಂತರಾಷ್ಟ್ರೀಯ ಮಟ್ಟವನ್ನು ತಲುಪಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು” ಎಂದು ಸಲಹೆ ನೀಡಿದರು.   

ಈ ಸಂದರ್ಭದಲ್ಲಿ ಹಿರಿಯ ಸಂಗೀತ ತಜ್ಞ ಮಹಾಮಹೋಪಾಧ‍್ಯಾಯ ಡಾ.ರಾ.ಸತ್ಯನಾರಾಯಣ, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಸರ್ವಮಂಗಳ ಶಂಕರ್ ಮತ್ತು ಕುಲಸಚಿವ ಡಾ.ನಿರಂಜನ್ ವಾನಳ್ಳಿ ಉಪಸ್ಥಿತರಿದ್ದರು.

Leave a Reply

comments

Tags

Related Articles

error: