ಕ್ರೀಡೆ

ಕೊಹ್ಲಿ ಭರ್ಜರಿ ಬ್ಯಾಟಿಂಗ್: ವಿಂಡೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ

ಹೈದರಾಬಾದ್‌,ಡಿ.7-ನಾಯಕ ವಿರಾಟ್ ಕೊಹ್ಲಿ (ಅಜೇಯ 94) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಮುನ್ನಡೆಯಲ್ಲಿದೆ.

ಇಲ್ಲಿನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೆಸ್ಟ್‌ ಇಂಡೀಸ್‌ ತನ್ನ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 207 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದರೆ, ಗುರಿ ಬೆನ್ನತ್ತಿದ ಟೀಂ ಇಂಡಿಯಾ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್‌ನಷ್ಟದಲ್ಲಿ 209 ರನ್‌ ಚಚ್ಚಿ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

ಭಾರತ ಬೃಹತ್‌ ಮೊತ್ತವನ್ನು ಯಶಸ್ವಿಯಾಗಿ ಮೆಟ್ಟಿನಿಂತಿರುವುದು ಇದೇ ಮೊದಲು. 2007ರಲ್ಲಿ ಶ್ರೀಲಂಕಾ ವಿರುದ್ಧ 207 ರನ್‌ಗಳ ಗುರಿ ಮೆಟ್ಟಿನಿಂತದ್ದು ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು. ಅಲ್ಲದೆ, ವೆಸ್ಟ್‌ಇಂಡೀಸ್ ವಿರುದ್ಧ ಟೀಂ ಇಂಡಿಯಾ ಸತತ ಏಳನೇ ಗೆಲುವು ಬಾರಿಸಿದೆ. ಇದು ನಾಲ್ಕನೇ ಬಾರಿ ತಂಡವೊಂದರ ವಿರುದ್ಧ ಭಾರತ 7 ಅಥವಾ ಅದಕ್ಕಿಂತಲೂ ಹೆಚ್ಚು ಜಯ ಗಳಿಸುತ್ತಿದೆ.

ವಿಂಡೀಸ್ ನ 208 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ರೂಪದಲ್ಲಿ ಆರಂಭಿಕ ಆಘಾತ ಎದುರಾಯಿತು. ರೋಹಿತ್ ಶರ್ಮಾ (8) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಕೆ.ಎಲ್.ರಾಹುಲ್ 40 ಎಸೆತಗಳಲ್ಲಿ 5 ಫೋರ್‌ ಮತ್ತು 4 ಸಿಕ್ಸರ್‌ಗಳೊಂದಿಗೆ 62 ರನ್‌ ಸಿಡಿಸಿ ತಂಡದ ಗೆಲುವಿನ ಹಾದಿಯನ್ನು ಸುಲಭವಾಗಿಸಿದರು.

ರಾಹುಲ್‌ ನಿರ್ಗಮನದ ಬಳಿಕ ತಂಡವನ್ನು ಗುರಿಮುಟ್ಟಿಸುವ ಜವಾಬ್ದಾರಿ ಹೊತ್ತಿಕೊಂಡ ಕೊಹ್ಲಿ, ಇನ್‌ಸೈಡ್‌ ಔಟ್‌ ಮತ್ತು ಫ್ಲಿಕ್‌ ಹೊಡೆತಗಳ ಮೂಲಕ ಅದ್ಭುತ ಸಿಕ್ಸರ್‌ಗಳೊಂದಿಗೆ ಕೇವಲ 50 ಎಸೆತಗಳಲ್ಲಿ ಅಜೇಯ 94 ರನ್‌ ಬಾರಿಸಿ ಜಯದ ರೂವಾರಿಯಾದರು. ಅವರ ಈ ಇನಿಂಗ್ಸ್‌ನಲ್ಲಿ ತಲಾ 6 ಫೋರ್‌ ಮತ್ತು ಸಿಕ್ಸರ್‌ಗಳು ಮೂಡಿಬಂದವು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಸ್ಕೋರ್‌ ದಾಖಲಿಸಿದರು. ಆದರೂ ಕೇವಲ ಆರು ರನ್ ಅಂತರದಿಂದ ಚೊಚ್ಚಲ ಶತಕ ಬಾರಿಸುವ ಅವಕಾಶವನ್ನು ಮಿಸ್ ಮಾಡಿಕೊಂಡರು. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿಲೇಡ್ ಟಿ20ಯಲ್ಲಿ ಅಜೇಯ 90 ರನ್ ಗಳಿಸಿರುವುದು ಕೊಹ್ಲಿ ಪಾಲಿಗೆ ಈ ವರೆಗಿನ ಶ್ರೇಷ್ಠ ಮೊತ್ತವಾಗಿತ್ತು.

ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್ ಬೇಟೆಯಲ್ಲಿ ರೋಹಿತ್ ಶರ್ಮಾ (2547) ದಾಖಲೆ ಮುರಿಯಲು ವಿರಾಟ್ ಕೊಹ್ಲಿಗಿನ್ನು (2544) ಕೇವಲ ಮೂರು ರನ್‌ಗಳ ಅಗತ್ಯವಿದೆ. ಇನ್ನೊಂದೆಡೆ ರೋಹಿತ್ ಹಿಂದಿಕ್ಕಿರುವ ಕೊಹ್ಲಿ 23ನೇ ಬಾರಿ 50ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ.

ಏತನ್ಮಧ್ಯೆ ಆಕರ್ಷಕ ಅರ್ಧಶತಕ (62) ಸಾಧನೆ ಮಾಡಿರುವ ಕೆ.ಎಲ್.ರಾಹುಲ್ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್‌ಗಳ ಮೈಲುಗಲ್ಲು ತಲುಪಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಏಳನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಭಾಜನವಾಗಿದ್ದಾರೆ. ಅಷ್ಟೇ ಯಾಕೆ ವಿಶ್ವ ಕ್ರಿಕೆಟ್‌ನಲ್ಲಿ ಮೂರನೇ ಅತಿ ವೇಗದಲ್ಲಿ ಸಹಸ್ರ ರನ್ ಸಾಧನೆ ಮಾಡಿದ ಹಿರಿಮೆಗೆ ಭಾಜನವಾಗಿದ್ದಾರೆ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಎವಿನ್‌ ಲೂಯಿಸ್‌ 17 ಎಸೆತಗಳಲ್ಲಿ 40 ರನ್‌ಗಳನ್ನು ಚಚ್ಚಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟರು.

ಲೂಯಿಸ್‌ ಹಾಕಿ ಕೊಟ್ಟ ಉತ್ತಮ ಅಡಿಪಾಯದ ಲಾಭ ಪಡೆದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಬ್ರ್ಯಾಂಡನ್‌ ಕಿಂಗ್‌ (31), ಶಿಮ್ರಾನ್‌ ಹೆಟ್ಮಾಯೆರ್‌ (56), ನಾಯಕ ಕೈರೊನ್‌ ಪೊಲಾರ್ಡ್‌ (37) ಮತ್ತು ಮಾಜಿ ನಾಯಕ ಜೇಸನ್‌ ಹೋಲ್ಡರ್‌ (ಅಜೇಯ 24) ಬೌಂಡರಿಗಳ ಸುರಿಮಳೆಗೈದು ತಂಡಕ್ಕೆ 20 ಓವರ್‌ಗಳಲ್ಲಿ 207/5 ರನ್‌ಗಳ ಬೃಹತ್‌ ಮೊತ್ತ ಪೇರಿಸಿದರು. ಭಾರತದ ಪರ ಯುಜ್ವೇಂದ್ರ ಚಹಲ್‌ 2, ರವೀಂದ್ರ ಜಡೇಜಾ 1, ದೀಪಕ್‌ ಚಹರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ ಒಂದು ವಿಕೆಟ್ ಪಡೆದರು.

ಎರಡನೇ ಪಂದ್ಯ ಡಿ.8ರಂದು ತಿರುವನಂತಪುರದಲ್ಲಿ ನಡೆಯಲಿದೆ. ಇಲ್ಲಿ ಗೆದ್ದರೆ ಭಾರತಕ್ಕೆ ಸರಣಿ ಗೆಲುವು ಲಭ್ಯವಾಗಲಿದೆ. (ಎಂ.ಎನ್)

Leave a Reply

comments

Related Articles

error: